ಸಮಗ್ರ ನ್ಯೂಸ್: ಪಂಜ ಸೀಮೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗುತ್ತಿದ್ದು, ಮಂಗಳವಾರ ರಾತ್ರಿ ಶ್ರೀ ದೇವರ ಬ್ರಹ್ಮ ರಥೋತ್ಸವ ನೆರದ ಭಕ್ತರ ಸಮ್ಮುಖದಲ್ಲಿ ಜರುಗಿತು.
ಈ ವೇಳೆ ಶ್ರೀ ಕಾಜು ಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ ಜರುಗಿತು. ಪೂರ್ವ ಸಂಪ್ರದಾಯದಂತೆ ವಿವಿಧ ವೈದಿಕ , ಧಾರ್ಮಿಕ ಕಾರ್ಯಕ್ರಮಗಳು ನಡೆದು ರಥೋತ್ಸವ ಜರುಗಿತು.
ಪೂರ್ವ ಸಂಪ್ರದಾಯದಂತೆ ಐವತ್ತೊಕ್ಲು ಪಟೇಲ್ ಮನೆಯವರನ್ನು ಹಾಗೂ ಪುತ್ಯ, ಕುದ್ವ ಮನೆಯ ಪೈಯೋಳಿ ಮಕ್ಕಳನ್ನು ರಥೋತ್ಸವಕ್ಕೆ ಸ್ವಾಗತಿಸಲಾಯಿತು. ಸಿಡಿಮದ್ದು ಪ್ರದರ್ಶನ ನಡೆಯಿತು.
ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ದೇಗುಲದ ಆಡಳಿತಾಧಿಕಾರಿ, ತಹಶೀಲ್ದಾರ್ ಜಿ. ಮಂಜುನಾಥ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ಉಪತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್., ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.
ಬುಧವಾರ ಮುಂಜಾನೆ ಕವಾಟೋದ್ಘಾಟನೆ ದೇವರಿಗೆ ಅಭಿಷೇಕ, ಬಲಿ ಹೊರಟು ಅವಭೃತ ಸ್ನಾನ ಜರುಗಿತು. ನಳಿಕ ಧ್ವಜಾವರೋಹಣ ನಡೆದು ಮಧ್ಯಾಹ್ನ ಮಹಾಪೂಜೆ ಜರುಗಿತು. ಸಂಜೆ ದೇಗುಲದಿಂದ ಶ್ರೀ ಕಾಚುಕುಜುಂಬ, ಉಳ್ಳಾಕುಲು ದೈವಗಳ ಭಂಡಾರ ವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿ ಬೈಲಿಗೆ ಹೋಗಿ ಧ್ವಜಾರೋಹಣ, ಶ್ರೀ ಕಾಚುಕುಜುಂಬ ದೈವದ ನೇಮ ಜರುಗಿತು.