ಸಮಗ್ರ ನ್ಯೂಸ್: ಕೇಂದ್ರದಿಂದ ದಕ್ಷಿಣ ಭಾರತಕ್ಕೆ ಅನ್ಯಾಯ ಆಗುತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿಕೆ ನೀಡಿದ್ದರು.ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ವಿಚಾರವಾಗಿ ಡಿಕೆ ಸುರೇಶ್ ವಿರುದ್ದದ ದೂರಿನ ವಿಚಾರಣೆಯನ್ನು ಮಂಗಳೂರು ಕೋರ್ಟ್ ಕೈಗೆತ್ತಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ದೂರುದಾರ ವಿಕಾಸ್ ಪುತ್ತೂರು ಪರ ವಕೀಲ ಮೋಹನ್ ರಾಜ್ ಕೆ.ಆರ್ ವಾದ ಮಂಡಿಸಿದ್ದಾರೆ. ಎಫ್ಐಆರ್ ದಾಖಲಿಸಿ ಡಿ.ಕೆ ಸುರೇಶ್ ವಿರುದ್ದ ತನಿಖೆ ನಡೆಸಲು ನಿರ್ದೇಶಿಸಲು ಮನವಿ ಮಾಡಿದ್ದು, ಆದರೆ ದೂರು ಅರ್ಜಿ ಸ್ವೀಕರಿಸಿದ ಮಂಗಳೂರಿನ 2ನೇ JMFC ನ್ಯಾಯಾಲಯ ಫೆ.12ಕ್ಕೆ ವಿಚಾರಣೆ ಮುಂದೂಡಿದೆ.
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಸಂಸದ ಡಿ.ಕೆ.ಸುರೇಶ್, ನಾನು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಸ್ತಾಪಿಸಿದ್ದೆ. ಕೇವಲ ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತವನ್ನು ಉಲ್ಲೇಖ ಮಾಡಿದ್ದೆ. ಯಾವತ್ತೂ ದೇಶ ಒಡೆಯುವ ಬಗ್ಗೆ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ಬಿಜೆಪಿ ತಿರುಚುವ ಪ್ರಯತ್ನ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.