ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ ಬಿಜೆಪಿಯ ಭದ್ರಕೋಟೆ. ಕರಾವಳಿ ಭಾಗದ ಪ್ರಮುಖ ಲೋಕಸಭಾ ಕ್ಷೇತ್ರವಾದ ದಕ್ಷಿಣ ಕನ್ನಡದಲ್ಲಿ ಈ ಬಾರಿ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಕಮಲ ಪಕ್ಷದ ಈ ನಡೆ ಅಚ್ಚರಿ ಮೂಡಿಸಿದೆ. ಕರ್ನಾಟಕ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬದಲು ಬೇರೆ ಅಭ್ಯರ್ಥಿ ಆಯ್ಕೆಯಾದರೂ ಅಚ್ಚರಿ ಇಲ್ಲ.
ರಾಷ್ಟ್ರೀಯತೆ ಹಾಗೂ ಸಾಮಾಜಿಕ, ಹಿಂದೂ ಪರ ಕೆಲಸ ಮಾಡುತ್ತಿರುವ ಮುಖಂಡರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕಟೀಲ್‌ಗೆ ಟಿಕೆಟ್ ತಪ್ಪಿಸಲು ಸಾಧ್ಯವೇ? ಎಂಬ ಪ್ರಶ್ನೆ ಮೂಡಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಾಗಲೇ ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಹಿಂದೂ ಕಾರ್ಯಕರ್ತರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದೂ, ಕಟೀಲ್ ರಾಜ್ಯಾಧ್ಯಕ್ಷರಾಗಿದ್ದರೂ ಹಿಂದೂ ಕಾರ್ಯಕರ್ತರ ರಕ್ಷಣೆಗೆ ಏನು ಮಾಡಲಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ತಪ್ಪಿದಾಗಲೂ ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಬ್ರಿಜೇಶ್ ಚೌಟ, ಮಹೇಶ್ ವಿಕ್ರಮ್ ಹೆಗ್ಡೆ ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ. ವಿರೋಧವಿದ್ದರೂ ಬೆಂಗಳೂರು-ಮಂಗಳೂರು ರೈಲು ಕೊಯಿಕ್ಕೋಡ್‌ಗೆ ವಿಸ್ತರಣೆ ಸ್ಥಳೀಯ ಮಟ್ಟದಲ್ಲಿ ಹಿಂದೂ ಪರ ಕೆಲಸ ಮಾಡುತ್ತಿರುವ ಬ್ರಿಜೇಶ್ ಚೌಟ ಹಾಗೂ ಪತ್ರಕರ್ತ ಮಹೇಶ್ ವಿಕ್ರಮ್ ಹೆಗ್ಡೆ ಬಗ್ಗೆ ಯುವ ಹಿಂದೂ ಕಾರ್ಯಕರ್ತರು ಒಲವು ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಹರ್ಷ ಹತ್ಯೆಯಾದಾಗ ಪೋಸ್ಟ್ ಕಾರ್ಡ್ ಅಭಿಯಾನದ ಮೂಲಕ 86 ಲಕ್ಷ ಹಣಕಾಸಿನ ನೆರವನ್ನು ಅವರ ಕುಟುಂಬಕ್ಕೆ ಒದಗಿಸಿದ್ದರು. ಪ್ರವೀಣ್ ನೆಟ್ಟಾರ ಹತ್ಯೆಯಾದಾಗ ಅವರ ಕುಟುಂಬಕ್ಕೆ 38 ಲಕ್ಷ ಹರಿದು ಬಂದಿತ್ತು. ಇದೆಲ್ಲವನ್ನು ಅವರ ಕುಟುಂಬದವರ ಖಾತೆಗೆ ನೇರವಾಗಿ ಜಮಾ ಮಾಡಿಸುವ ಪಾರದರ್ಶಕ ಅಭಿಯಾನಗಳನ್ನು ವಿಕ್ರಮ್ ಹೆಗ್ಡೆ ನಡೆಸಿದ್ದರು. ಕಲ್ಲಡ್ಕ ಪ್ರಭಾಕರ್ ಅವರ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಮಧ್ಯಾಹ್ನದ ಬಿಸಿ ಉಟಕ್ಕೆ ಸರ್ಕಾರ ಅನುದಾನ ಕಡಿತ ಮಾಡಿದಾಗ ಭೀಕ್ಷಾಂದೇಹಿ ಎಂಬ ಅಭಿಯಾನಕ್ಕೆ ಕರೆ ಕೊಟ್ಟಿದ್ದ ಮಹೇಶ್ ವಿಕ್ರಮ್ ಹೆಗ್ಡೆ ದೊಡ್ಡ ಪ್ರಮಾಣದಲ್ಲಿ ನೆರವು ದೊರೆಯುವಂತೆ ಕಾರ್ಯ ನಿರ್ವಹಿಸಿದ್ದರು. ವಿಕ್ರಮ ಫೌಂಡೇಶನ್ ಅಡಿಯಲ್ಲಿ ನೂರು ಮಕ್ಕಳನ್ನ ದತ್ತು ಪಡೆದು ವಿದ್ಯಾಭ್ಯಾಸಕ್ಕೆ ಬೆಳಕಾಗಿರುವ ಹೆಗ್ಡೆಯವರು, ಜಾತಿ ಮತ ನೋಡದೇ ಎಲ್ಲ ಧರ್ಮದ ಬಡ ಮಕ್ಕಳಿಗೆ ನೆರವಾಗಿದ್ದಾರೆ.
ಸುಳ್ಯದ ಕಡು ಬಡವರಿಗೆ ಮನೆ ಕಟ್ಟಿಸಿಕೊಡುವ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲವನ್ನೂ ಗಮನಿಸಿರುವ ಹಿಂದೂ ಕಾರ್ಯಕರ್ತರು ಬ್ರಿಜೇಶ್ ಚೌಟ ಅಥವಾ ಮಹೇಶ್ ವಿಕ್ರಮ್ ಹೆಗ್ಡೆಯವರಿಗೆ ಟಿಕೆಟ್ ನೀಡುವಂತೆ ಒಲವು ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು ಸದ್ಯದ ಮಾಹಿತಿ.
ದಕ್ಷಿಣ ಕನ್ನಡದ ಚುನಾವಣೆ ಮೇಲೆ ಜಾತಿವಾರು ರಾಜಕಾರಣ ಅಷ್ಟು ಪ್ರಭಾವ ಬೀರದಿದ್ದರೂ ಸಹ ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಕೈ ತಪ್ಪುವುದನ್ನು ಕಾಂಗ್ರೆಸ್ ಎದುರು ನೋಡುತ್ತಿದೆ. ಒಂದು ವೇಳೆ ಕಟೀಲ್ ಬದಲು ಬಿಜೆಪಿ ಬ್ರಿಜೇಶ್ ಚೌಟ ಅಥವಾ ಮಹೇಶ್ ವಿಕ್ರಮ್ ಹೆಗ್ಡೆಗೆ ಟಿಕೆಟ್ ನೀಡಿದರೆ ಕಾಂಗ್ರೆಸ್‌ನಿಂದ ಈಡಿಗ- ಬಿಲ್ಲವ ಸಮುದಾಯದ ವಿನಯ ಕುಮಾರ್ ಸೊರಕೆಯನ್ನು ಕಣಕ್ಕಿಳಿಸಲು ತಂತ್ರ ಹೆಣೆಯುತ್ತಿದೆ. ಈ ಹಿಂದೆ ಬಂಟ ಸಮುದಾಯದ ಮಿಥುನ್ ರೈಗೆ ಟಿಕೆಟ್ ನೀಡಿದ್ದ ಕಾಂಗ್ರೆಸ್ ಈ ಬಾರಿ ತನ್ನ ತಂತ್ರವನ್ನು ಬದಲಾಯಿಸಿಕೊಳ್ಳುವ ಸಾಧ್ಯತೆ ಇದೆ. 2019ರ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ 774,285 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಮಿಥುನ್ ರೈ 499,664 ಮತಗಳನ್ನು ಪಡೆದಿದ್ದರು. ಎಸ್‌ಡಿಪಿಐನ ಮೊಹಮ್ಮದ್ ಇಲಿಯಾಸ್ 46,839 ಮತಗಳನ್ನು ಪಡೆದಿದ್ದರು.