ಸಮಗ್ರ ನ್ಯೂಸ್:ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಹೊಸದಾಗಿ ಅಶ್ವಮೇಧ ಬಸ್ಸುಗಳಿಗೆ ಚಾಲನೆ ನೀಡಲಾಯಿತು. ಇದರಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಾಗಿ ಘೋಷಣೆ ಮಾಡಲಾಗಿದೆ. ಕೆಎಸ್ಆರ್ಟಿಸಿಗೆ ಒಟ್ಟು ಸಾವಿರ ಹೊಸ ಬಸ್ಗಳು ಬರಲಿದ್ದು, ಮೊದಲ ಹಂತದಲ್ಲಿ ನೂರು ಹೊಸ ಕ್ಲಾಸಿಕ್ ಬಸ್ಗಳು ಬಂದಿವೆ. ವಿಧಾನಸೌಧದ ಆವರಣದಲ್ಲಿ ಬಣ್ಣ ಬಣ್ಣದ ಬಗೆ ಬಗೆಯ ಹೂವುಗಳಿಂದ ಸಿಂಗಾರಗೊಂಡಿರುವ ಅಶ್ವಮೇಧ ಬಸ್ಗಳಿಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಅಶ್ವಮೇಧ ಬಸ್ಗೆ ಚಾಲನೆ ಸಮಾರಂಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹ ಹಾಜರಿದ್ದರು.
ಈ ಬಸ್ ನ ವಿಶೇಷತೆಗಳು:
ಅಶ್ವಮೇಧ ಕ್ಲಾಸಿಕ್ ಬಸ್ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ 12 ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮರಾ, ಮೊಬೈಲ್ ಫೋನ್ ಚಾರ್ಜ್ ಹಾಕಿಕೊಳ್ಳಲು ಆರು ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. 52 ಸೀಟು, ಬಸ್ಸಿನ ಒಳಗೆ ಮತ್ತು ಹೊರ ಭಾಗದಲ್ಲಿ ಎಲ್ಇಡಿ ಮಾರ್ಗಫಲಕ, ಪ್ರಯಾಣಿಕರು ಲಗೆಜ್ ಇಡಲು ದೊಡ್ಡದಾದ ಸ್ಥಳದ ವ್ಯವಸ್ಥೆ ಮಾಡಲಾಗಿದೆ. ಅಶ್ವಮೇಧ ಕ್ಲಾಸಿಕ್ ಬಸ್ಗಳು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪಾಯಿಂಟ್ ಟೂ ಪಾಯಿಂಟ್ ಎಕ್ಸ್‌ಪ್ರೆಸ್ ಬಸ್ಸುಗಳಾಗಿವೆ. ಮಹಿಳೆಯರು ಈ ಬಸ್ಸುಗಳಲ್ಲೂ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಸದ್ಯ ನೂರು ಬಸ್ಗಳಿಗೆ ಚಾಲನೆ ನೀಡಲಾಗಿದ್ದು, ಇವು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ಕಾರ್ಯಾಚರಣೆ ಆರಂಭಿಸಲಿವೆ. ಮುಂದಿನ ದಿನಗಳಲ್ಲಿ ಒಟ್ಟು ಸಾವಿರ ಅಶ್ವಮೇಧ ಬಸ್ಗಳು ಕೆಎಸ್ಆರ್ಟಿಸಿಗೆ ಬರಲಿದ್ದು, ರಾಜ್ಯದಾದ್ಯಂತ ಕಾರ್ಯಾಚರಣೆ ಆರಂಭಿಸಲಿವೆ.