ಸಮಗ್ರ ನ್ಯೂಸ್: ಮಂಡ್ಯ ಜಿಲ್ಲೆಯ ಕೆರೆಗೋಡುನಲ್ಲಿ ಇತ್ತೀಚೆಗೆ ಹನುಮಧ್ವಜ ವಿಚಾರವಾಗಿ ಸಂಘರ್ಷ ನಡೆಯುತ್ತಿತ್ತು. ಆದರೆ ಈ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ಇದೀಗ ಹಿಂದೂಪರ ಸಂಘಟನೆ ಕಾರ್ಯಕರ್ತರು ಮತ್ತೆ ಹನುಮಧ್ವಜವನ್ನ ಹಾರಿಸುತ್ತೇವೆ ಎಂಬ ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ, ಇಂದು ಕೆರಗೋಡು ಗ್ರಾಮದಲ್ಲಿ ಮನೆ ಮನೆಗಳ ಮೇಲೆ ಬಿಜೆಪಿ ಕಾರ್ಯಕರ್ತರು ಹನುಮಧ್ವಜವನ್ನ ಹಾರಿಸಿದ್ದಾರೆ. ಇದು ಸರ್ಕಾರಕ್ಕೆ ಸವಾಲಾಗಿದೆ.
ಜನವರಿ 28ರಂದು ಕೆರೆಗೋಡು ಗ್ರಾಮದ ಅರ್ಜುನ ಸ್ತಂಭದ ಮೇಲಿದ್ದ ಹನುಮಧ್ವಜವನ್ನ ಕೆಳಗೆ ಇಳಿಸಿ, ತಿರಂಗವನ್ನ ಜಿಲ್ಲಾಡಳಿತ ಸ್ತಂಬದ ಮೇಲೆ ಹಾರಿಸಿತ್ತು. ಆಗ ಹೊತ್ತಿಕೊಂಡ ಕಿಚ್ಚು ಗ್ರಾಮದಲ್ಲಿ ಇಲ್ಲಿಯವರೆಗೂ ಬಂದಿದೆ. ಮತ್ತೆ ಅರ್ಜುನ ಸ್ತಂಬದ ಮೇಲೆ ಹನುಮ ಧ್ವಜವನ್ನ ಹಾರಿಸಿಯೇ ಹಾರಿಸುತ್ತೇವೆ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ದಾರೆ. ಈ ಮಧ್ಯೆ ಬಿಜೆಪಿ ನೂತನ ಅಭಿಯಾನ ಆರಂಭಿಸಿದ್ದು, ಮನೆ ಮನೆಗಳ ಮೇಲೆ ಹನುಮಧ್ವಜ ಹಾರಿಸುವ ಅಭಿಯಾನ ಹಮ್ಮಿಕೊಂಡಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ನೇತೃತ್ವದಲ್ಲಿ ಇವತ್ತು ಹನುಮಧ್ವಜ ಅಭಿಯಾನ ಹಮ್ಮಿಕೊಂಡಿದ್ದು, ಕೆರೆಗೋಡು ಗ್ರಾಮದಲ್ಲಿ ಆಂಜನೇಯಸ್ವಾಮಿ ಪೂಜೆ ಸಲ್ಲಿಸಿ ನಂತರ ಗ್ರಾಮದಲ್ಲಿ ಮನೆಗಳ ಮೇಲೆ ಹನುಮಧ್ವಜವನ್ನ ಕಟ್ಟಲಾಯಿತು. ಈ ವೇಳೆ ಮಾತನಾಡಿ, ಈ ಅಭಿಯಾನವನ್ನ ಇಡೀ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುತ್ತೇವೆ ಎಂದರು.
ಇದೆ ವಿಚಾರಕ್ಕೆ ವಿರೋಧವಾಗಿ ಫೆಬ್ರವರಿ 7 ಹಾಗೂ 9 ರಂದು ಮಂಡ್ಯ ನಗರ ಬಂದ್ ಗೆ ಕರೆ ನೀಡಲಾಗಿದೆ. ಫೆಬ್ರವರಿ 7ರಂದು ಸಮಾನ ಮನಸ್ಕ ವೇದಿಕೆ ಜಿಲ್ಲೆಯಲ್ಲಿ ಅಶಾಂತಿ ಮೂಡುತ್ತಿದೆ ಎಂದು ಬಂದ್ ಗೆ ಕರೆ ನೀಡಿದ್ರೆ, ಮತ್ತೊಂದು ಕಡೆ ಹನುಮಧ್ವಜವನ್ನ ಇಳಿಸಿರುವುದನ್ನ ಖಂಡಿಸಿ ಫೆಬ್ರವರಿ 9ರಂದು ಬಂದ್ ಗೆ ಭಜರಂಗದಳ ಕರೆಕೊಟ್ಟಿದೆ. ಆದರೆ ಈ ಎರಡು ಬಂದ್ ಗಳಿಗೆ ಯಾವುದೇ ಬೆಂಬಲ ನೀಡಲ್ಲ ಎಂದು ಆಟೋ ಚಾಲಕರು ಹಾಗೂ ವಾಣಿಜ್ಯ ಮಂಡಳಿ ವರ್ತಕರು ಹೇಳಿದ್ದಾರೆ. ಇದು ರಾಜಕೀಯ ಪ್ರೇರಿತ ಬಂದ್ ಆಗಿದೆ. ಹಾಗಾಗಿ ನಾವು ಯಾವುದೇ ಬೆಂಬಲ ನೀಡಲ್ಲ. ಎಂದಿನಂತೆ ಆಟೋಗಳ ಸಂಚಾರ, ವ್ಯಾಪಾರ ವಹಿವಾಟು ಇದೆ ಎಂದು ತಿಳಿಸಿದ್ದಾರೆ.