ಸಮಗ್ರ ನ್ಯೂಸ್: ಇತ್ತೀಚೆಗೆ ಹಂಪಿಯಲ್ಲಿ ಡ್ರೆಸ್ ಕೋಡ್ (Dress Code Temple) ಜಾರಿ ಮಾಡಲಾಗಿತ್ತು. ಆದರೆ ಇದೀಗ ದೇಗುಲಗಳಲ್ಲಿ ವಸ್ತ್ರಸಂಹಿತೆ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿರುವುದರ ಜೊತೆಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಜ. 31ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಬಗ್ಗೆ ಹಿರಿಯ ಸಾಹಿತಿ ಮರುಳಸಿದ್ಧಪ್ಪ ಅವರು ಸಿಎಂ ಮುಂದೆಯೇ ಅಕ್ಷೇಪ ವ್ಯಕ್ತಪಡಿಸಿದ್ದರು. ಮೈತುಂಬಾ ಬಟ್ಟೆ ಹಾಕಿಕೊಂಡು ಹೋಗಬೇಕು ನಿಜ. ಹಾಗಂತ ಮಹಿಳೆಯರು ಸೀರೆ, ಪುರುಷರು ಪಂಚೆ ಉಡಬೇಕು ಅನ್ನೋದು ಯಾಕೆ? ಇದು ಪ್ರಜಾಪ್ರಭುತ್ವ ತತ್ವಕ್ಕೆ ಮಾರಕ ಎಂಬುದಾಗಿ ಮರುಳ ಸಿದ್ಧಪ್ಪ ಆಕ್ಷೇಪ ಎತ್ತಿದರು.
ಇದಾದ ಬಳಿಕ ವೇದಿಕೆಯಲ್ಲಿಯೇ ಸ್ಪಷ್ಟೀಕರಣ ನೀಡಿದ ಸಿಎಂ, ನಮ್ಮ ಮುಜರಾಯಿ ಇಲಾಖೆ ಈ ತೀರ್ಮಾನ ಎಲ್ಲಾ ಮಾಡಿಲ್ಲ. ಇಂಥದ್ದೇ ಡ್ರೆಸ್ ಹಾಕಬೇಡಿ ಅಥವಾ ಹಾಕಿ ಅನ್ನೋದು ತಪ್ಪು. ಶರ್ಟ್, ಪ್ಯಾಂಟ್ ಧರಿಸಿಕೊಂಡು ಹೋಗಬೇಡಿ, ಸೀರೆ ಹಾಕ್ಕೊಂಡು ಹೋಗಿ ಅಂತಾ ಹೇಳೋದು ಸರಿಯಲ್ಲ. ನಾವು ಇಂಥದ್ದೇ ಡ್ರೆಸ್ ಹಾಕಿಕೊಳ್ಳಿ ಅಥವಾ ಬಟ್ಟೆ ಬಿಚ್ಚಾಕ್ಕೊಂಡು ಬನ್ನಿ ಅಂತಾ ಹೇಳಲ್ಲ ಎಂದು ಸಿಎಂ ವಿವಾದಾತ್ಮಕ ಹೇಳಿಕೆ ನೀಡಿದರು.
ಶುದ್ಧ ಮನಸ್ಸಿನಿಂದ ದೇವಸ್ಥಾನಕ್ಕೆ ಹೋಗಬೇಕು, ಶುದ್ಧ ಭಕ್ತಿ ಇಲ್ಲದೇ ಬಟ್ಟೆ ಸರಿಯಾಗಿ ಹಾಕಿಕೊಂಡು ಹೋದರೆ ಏನ್ ಪ್ರಯೋಜನ ಎಂದು ಸಿಎಂ ಇದೇ ವೇಳೆ ಪ್ರಶ್ನೆಯನ್ನು ಹಾಕಿದರು.
ಖಾಸಗಿ ದೇಗುದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತಂದಿದ್ದು ನಿಜ. ಆದರೆ ಸಿದ್ದರಾಮಯ್ಯ ಸರ್ಕಾರದ ಮುಜರಾಯಿ ಇಲಾಖೆ ದೇಗುಲದಲ್ಲಿ ಹಲವೆಡೆ ವಸ್ತ್ರ ಸಂಹಿತೆ ತಂದಿರುವ ನಿರ್ಧಾರಕ್ಕೆ ಖುದ್ದು ಸಿಎಂ ಅವರೇ ವಿರೋಧ ವ್ಯಕ್ತಪಡಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.