ಸಮಗ್ರ ನ್ಯೂಸ್: ಸಂಸತ್ತಿನ ಬಜೆಟ್ ಅಧಿವೇಶನ ಬುಧವಾರ(ಜ.31) ಆರಂಭವಾಗಲಿದ್ದು, ಲೋಕಸಭಾ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್ ಮಂಡಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಜ್ಜಾಗಿದೆ.
ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಭಾಷಣ ಮಾಡಲಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್‌ನಲ್ಲಿ ದೊಡ್ಡ ಘೋಷಣೆಗಳು ಇರುವುದಿಲ್ಲ ಎಂದು ನಿರ್ಮಲಾ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ನೂತನ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದೆ.
ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ಅರ್ಪಿಸುವ ನಿರ್ಣಯದ ಮೇಲಿನ ಚರ್ಚೆ ಶುಕ್ರವಾರ ಆರಂಭವಾಗಲಿದೆ. ಇದಕ್ಕೆ ಉಭಯ ಸದನಗಳಲ್ಲಿ ಪ್ರಧಾನಿಯವರು ಉತ್ತರ ನೀಡಿದ ನಂತರ, ಬಜೆಟ್ ಮೇಲೆ ಚರ್ಚೆ ನಡೆಯುವ ಸಾಧ್ಯತೆಯಿದೆ.
ಅಧಿವೇಶನದ ಮುನ್ನ ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಮಂಗಳವಾರ ನಡೆಯಿತು. ಸುಗಮ ಕಲಾಪ ನಡೆಸಲು ಎಲ್ಲ ಪಕ್ಷಗಳ ಸಹಕಾರವನ್ನು ಸರ್ಕಾರ ಕೋರಿತು. ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ಸೌಹಾರ್ದಯುತವಾಗಿ ಸರ್ವಪಕ್ಷ ಸಭೆ ನಡೆದಿದೆ. ಅಧಿವೇಶನದಲ್ಲಿ ಪ್ರತಿಯೊಂದು ವಿಷಯದ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು.