ಸಮಗ್ರ ನ್ಯೂಸ್: ದ.ಕ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಮಂಡಲವಾರು ನೇಮಕ ಪ್ರಕ್ರಿಯೆಗಳು ನಡೆಯುತಿದೆ. ಈ ನಡುವೆ ಸುಳ್ಯ ಮಂಡಲ ಬಿಜೆಪಿ ನೂತನ ಅಧ್ಯಕ್ಷರಾಗಿ ಮಾಜಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ ಅವರನ್ನು ಕೋರ್ ಕಮಿಟಿ ಆಯ್ಕೆ ಮಾಡಿದ್ದು ಘೋಷಣೆಯ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಬಿಜೆಪಿ ಮಾಜಿ ಸಂಘಟನಾ ಕಾರ್ಯದರ್ಶಿ ಬೆಳ್ಳಾರೆ ಮೂಲದ ಯತೀಶ್ ಆರ್ವಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ವಕೀಲ ಮತ್ತು ಎಪಿಎಂಸಿ ಸದಸ್ಯರಾಗಿದ್ದ ವಿನಯ್ ಮುಳುಗಾಡು ಹಾಗೂ ನ.ಪಂ. ಅಧ್ಯಕ್ಷರಾಗಿದ್ದ ವಿನಯ್ ಕುಮಾರ್ ಕಂದಡ್ಕ ನಡುವೆ ಅಧ್ಯಕ್ಷ ಹುದ್ದೆಗೆ ಪ್ರಬಲ ಪೈಪೋಟಿಯಿಂದಾಗಿ ಬೇರೆ ದಾರಿ ಕಾಣದಂತಾದ ಕೋರ್ ಕಮಿಟಿ ಅನಿವಾರ್ಯವಾಗಿ ವೆಂಕಟ್ ವಳಲಂಬೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ರಾಜಕೀಯ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯ ಪ್ರತಿನಿಧಿಗಳಿಲ್ಲದೇ ಇರುವುದರಿಂದ ಮುಂಬರುವ ಸಂಸತ್ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಅಭ್ಯರ್ಥಿ ಯಾಗಿ ಎರಡೂ ರಾಷ್ಡ್ರೀಯ ಪಕ್ಷಗಳವರು ಒಕ್ಕಲಿಗ ಗೌಡ ಸಮುದಾಯ ಅಭ್ಯರ್ಥಿಯನ್ನೇ ಪರಿಗಣಿಸಬೇಕೆಂದು ಸಮುದಾಯದಲ್ಲಿ ಪ್ರಬಲ ಆಗ್ರಹವಿದ್ದು ತಪ್ಪಿದಲ್ಲಿ ಪಕ್ಷೇತರವಾಗಿ ಕಣಕ್ಕಿಳಿಸುವುದೆಂದು ಇತ್ತಿಚೆಗಷ್ಟೆ ಸಮುದಾಯ ಮುಖಂಡರು ಮಾಧ್ಯಮ ಹೇಳಿಕೆ ನೀಡಿರುವುದು ಗಮನಾರ್ಹ.
ಈ ಹಿನ್ನಲೆಯಲ್ಲಿ ವೆಂಕಟ್ ವಳಲಂಬೆ ಅವರು ಪರಿವಾರ ಮತ್ತು ಬಿಜೆಪಿ ಎರಡನ ಸಮನ್ವಯತೆಯಿಂದ ಕಾಯ್ದುಕೊಳ್ಳುವಲ್ಲಿ ಸಮರ್ಥರಿದ್ದು, ಯತೀಶ್ ಅವರು ಸಂಘಟನಾ ಕಾರ್ಯದರ್ಶಿಯಾಗಿ ತಮ್ಮ ಜೀವನವನ್ನು ಪಕ್ಷಕ್ಕಾಗಿ ತೊಡಗಿಸಿಕೊಂಡಿರುವ ಹಿನ್ನೆಲೆಯನ್ನು ಪರಿಗಣಿಸಿ ಆಯ್ಕೆ ನಡೆದಿದೆ ಎನ್ನಲಾಗಿದೆ.
ಪುತ್ತೂರಿನ ಕಿಶೋರ್ ಬೊಟ್ಯಾಡಿ ಹಾಗು ಮಂಗಳೂರಿನ ಮೇಯರ್ ಪ್ರೇಮಾನಂದ ಶೆಟ್ಟಿ ಇನ್ನಿಬ್ಬರು ಜಿಲ್ಲಾ ಪ್ರ.ಕಾರ್ಯದರ್ಶಿಯಾಗಿ ಆಯ್ಕೆಗೊಂಡವರು ಎನ್ನಲಾಗಿದೆ.