ಸಮಗ್ರ ನ್ಯೂಸ್: ಡ್ರೋನ್ ಪ್ರತಾಪ್ ಅಂತ ಫೇಮಸ್ ಆಗಿರುವ ಪ್ರತಾಪ್ ತಾವು ವಿದೇಶಗಳಲ್ಲಿ ಭಾರಿ ಗೌರವ, ಆದರಗಳನ್ನು ಪಡೆದಿದ್ದಾಗಿ ಸುಳ್ಳು ಹೇಳಿ ತೀವ್ರ ಟ್ರೋಲ್ಗೆ ಒಳಗಾಗಿದ್ದರು. ಅದಾದ ಬಳಿಕ ತಾವೇ ಒಂದು ಡ್ರೋನ್ ಸಂಸ್ಥೆ ಪ್ರಾರಂಭಿಸಿ, ರೈತರಿಗೆ ಅನುಕೂಲಕರವಾಗುವಂತೆ ಡ್ರೋನ್ ನಿರ್ಮಿಸಿ ಮಾರಾಟ ಮಾಡುತ್ತಿರುವುದಾಗಿ ಹೇಳಿ ಹಲವು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಪ್ರತಾಪ್, ತಮ್ಮ ಡ್ರೋನ್ಗಳನ್ನು ಮಾರಾಟ ಮಾಡಿದ್ದ ಸಂಸ್ಥೆಯ ಸಿಇಓ ಪ್ರತಾಪ್ ವಿರುದ್ಧ ಆರೋಪ ಮಾಡಿದ್ದಾರೆ.
ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಹೆಸರಿನ ಸಂಸ್ಥೆಯ ಸಿಇಓ ಸಾರಂಗ್ ಮಾನೆ ಎಂಬುವರು ಕೆಲ ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರಿಗೆ ಎಂಟು ಡ್ರೋನ್ಗಳನ್ನು ನೀಡುವಂತೆ ಒಪ್ಪಂದ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದರು. ಆದರೆ ನಾಲ್ಕು ಡ್ರೋನ್ಗಳನ್ನಷ್ಟೆ ನೀಡಿರುವ ಪ್ರತಾಪ್, ಉಳಿದ ಡ್ರೋನ್ಗಳನ್ನು ನೀಡಿಲ್ಲ ಅದರಲ್ಲೂ ಕೊಟ್ಟಿರುವ ನಾಲ್ಕು ಡ್ರೋನ್ಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಸಾರಂಗ್ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಾರಂಗ್ ಮಾನೆ, ಕಳೆದ ವರ್ಷ ನಾಸಿಕ್ ಡ್ರೋನ್ ಎಕ್ಸಿಬಿಷನ್ನಲ್ಲಿ ನಾನು ಡ್ರೋನ್ ಪ್ರತಾಪ್ರ ಡ್ರೋನ್ಗಳನ್ನು ನೋಡಿದ್ದೆ. ಬಳಿಕ ಧುಲಿಯಾನಲ್ಲಿ ಅವರ ಸಿಎ ಸಾಗರ್ ಮುಖಾಂತರ ಅವರ ಕಚೇರಿಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಒಟ್ಟು ಎಂಟು ಡ್ರೋನ್ ನೀಡುವಂತೆ ಮಾತುಕತೆ ಮಾಡಿ 35.75 ಲಕ್ಷ ರೂಪಾಯಿ ಹಣ ಪಾವತಿ ಮಾಡಿದೆವು. ಈ ಹಣವನ್ನು ನಾವು ರೈತರಿಂದ ಪಡೆದ ಅಡ್ವಾನ್ಸ್ ಹಾಗೂ ಬ್ಯಾಂಕ್ನಿಂದ ಪಡೆದ ಸಾಲವನ್ನು ಒಟ್ಟು ಮಾಡಿ ನೀಡಿದ್ದೆವು. ಮೊದಲ ಎರಡು ಡ್ರೋನ್ಗಳನ್ನು ನೀಡಲು ಪ್ರತಾಪ್ ಎರಡು ತಿಂಗಳು ತಡ ಮಾಡಿದರು. ಅದಾದ ನಾಲ್ಕು ತಿಂಗಳ ಬಳಿಕ ಇನ್ನೆರಡು ಡ್ರೋನ್ಗಳನ್ನು ನೀಡಿದರು. ಅದಾದ ಬಳಿಕ ಯಾವುದೇ ಡ್ರೋನ್ ನೀಡಿಲ್ಲ. ಇನ್ನೂ ನಾಲ್ಕು ಡ್ರೋನ್ಗಳನ್ನು ಅವರು ನಮಗೆ ನೀಡಬೇಕಿದೆ’ ಎಂದಿದ್ದಾರೆ. ಕೊಟ್ಟಿರುವ ಡ್ರೋನ್ ಸರಿ ಇಲ್ಲ, ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಆತ ನಮಗೆ ಡ್ರೋನ್ ಕೊಡುತ್ತಾನೆ ಎಂಬ ನಂಬಿಕೆ ಇಲ್ಲ ಎಂದಿದ್ದಾರೆ.
ಬಿಗ್ಬಾಸ್ ಮನೆಯಿಂದ ಹೊರಗೆ ಬರುವವರೆಗೆ ಕಾಯುತ್ತೇವೆ. ಹೊರಗೆ ಬಂದ ಬಳಿಕ ಆತನೊಟ್ಟಿಗೆ ಚರ್ಚಿಸಿ ಮುಂದಿನ ಹೆಜ್ಜೆ ನೋಡುತ್ತೇವೆ. ಡ್ರೋನ್ ಸರಿಯಾದ ಸಮಯಕ್ಕೆ ನೀಡದ ಕಾರಣ ನಮಗೆ 83 ಲಕ್ಷ ರೂಪಾಯಿ ನಷ್ಟವಾಗಿದೆ. ಅಷ್ಟೂ ಹಣವನ್ನು ಆತ ಭರಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದು ಸಾರಂಗ್ ಹೇಳಿದ್ದಾರೆ.