ಸಮಗ್ರ ನ್ಯೂಸ್: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ತೊರೆದು ಮತ್ತೆ ಬಿಜೆಪಿ ಸೇರ್ಪಡೆಯಾಗಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅವರು ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮೊದಲೇ ಅವರು ಡಿ.ಕೆ ಶಿವಕುಮಾರ್ಗೆ ಎಚ್ಚರಿಕೆ ನೀಡಿದ್ದಾರೆ.
ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳುವಾಗ ಯೋಚಿಸಬೇಕು. ಅವರ ಹಿನ್ನೆಲೆ, ಸಿದ್ಧಾಂತ ಏನೆಂದು ಅರಿತುಕೊಳ್ಳಬೇಕು. ಪಕ್ಷಕ್ಕೆ ನಿಷ್ಠಾವಂತರು ಮಾತ್ರ ಬರಬೇಕು. ಹೀಗೆ ಬಂದರು, ಹಾಗೆ ಹೋದರು ಅಂತ ಆಗಬಾರದು. ಅವರ ತತ್ವಗಳ ಆಧಾರದ ಮೇಲೆ ಸೇರ್ಪಡೆ ಮಾಡಿಕೊಳ್ಳಿ ಎಂದು ರಾಜ್ಯ ನಾಯಕರಿಗೆ ಖರ್ಗೆ ಕಿವಿಮಾತು ಹೇಳಿದರು. ಜತೆಗೆ, ಪರೋಕ್ಷವಾಗಿ ಶೆಟ್ಟರ್ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ಇನ್ನು ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದ ಖರ್ಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಜನವರಿ 26 ಭಾರತದ ಇತಿಹಾಸದಲ್ಲಿ ವಿಶೇಷ ದಿನ. ಸಂವಿಧಾನ ಇಲ್ಲದಿದ್ರೆ ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ. ಸಂವಿಧಾನ ತಿರುಚುವ ಕುತಂತ್ರವನ್ನು ಆರ್ಎಸ್ಎಸ್, ಬಿಜೆಪಿ ಮಾಡುತ್ತಿವೆ. ಸ್ವಾಯತ್ತ ಸಂಸ್ಥೆಗಳನ್ನ ನಾಶ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಪ್ರಧಾನಿ ಮೋದಿ ಆರ್ಎಸ್ಎಸ್ ಕೈಗೊಂಬೆಯಾಗಿ ನಡೆದುಕೊಂಡಿದ್ದಾರೆ. ಇದರಿಂದ ನ್ಯಾಯಾಂಗ, ಜಾತ್ಯತೀತ ತತ್ವಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದರು.