ಸಮಗ್ರ ಸಮಾಚಾರ:ಯೋಧರು ತಮ್ಮ ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸುತ್ತಿರುವುದರಿಂದ ದೇಶದಲ್ಲಿ ಶಾಂತಿ ನೆಲೆಸಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಸುಳ್ಯ ಪಟ್ಟಣ ಪಂಚಾಯತ್ ಕಛೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಯುದ್ಧ ಸ್ಮಾರಕದ ಲೋಕಾರ್ಪಣೆ ಮತ್ತು ಯುದ್ಧ ಸ್ಮಾರಕಕ್ಕೆ ಗೌರವಾರ್ಪಣೆ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇಂದು ಸುಳ್ಯದಲ್ಲಿ ಯುದ್ಧ ಸ್ಮಾರಕ ನಿರ್ಮಾಣಗೊಂಡಿದೆ ಇದು ಇಲ್ಲಿನ ಜನರಿಗೆ ಪ್ರೇರಣೆಯಾಗುವ ಮೂಲಕ ಸುಳ್ಯದಿಂದಲೂ ಹಚ್ಚು ಹೆಚ್ಚು ಸೈನಿಕರು ಸೇವೆಗೆ ಸೇರುವಂತಾಗಲಿ ಎಂದ ಅವರ ಪ್ರಧಾನಿ ನರೇಂದ್ರ ಮೋದಿ ಅವರ ಅಗ್ನಿಪಥ್ ಯೋಜನೆ ಮೂಲಕ ಯುವ ಜನತೆ ಸೇನೆ ಸೇರಲು ಪ್ರೇರಣೆಯಾಗಿದೆ ಎಂದರು.
ನಿವೃತ್ತ ಕರ್ನಲ್ ಎನ್.ಎಸ್. ಭಂಡಾರಿ ಯುದ್ಧ ಸ್ಮಾರಕಕ್ಕೆ ಗೌರವಾರ್ಪಣೆ ಸಲ್ಲಿಸಿ ಮಾತನಾಡಿ, ಯುದ್ಧ ಸ್ಮಾರಕ ನಿರ್ಮಿಸುವ ಮೂಲಕ ಯೋಧರಿಗೆ ಗೌರವ ಸಲ್ಲಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಯುವಕರಿಗೆ ಪ್ರೇರಣೆಯಾಗುವ ಮೂಲಕ ಯುವಕರಲ್ಲಿ ದೇಶಬಕ್ತಿ ಮೂಡಲಿ ಎಂದರು.
ಮಾಜಿ ಸಚಿವ ಎಸ್.ಅಂಗಾರ ಯುದ್ಧ ಸ್ಮಾರಕ ಲೋಕಾರ್ಪಣೆ ಮಾಡಿದರು. ಸುಳ್ಯ ತಹಶಿಲ್ದಾರ್ ಹಾಗೂ ನ.ಪಂ. ಆಡಳಿತಾಧಿಕಾರಿ ಜಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಎಒಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಮಂಗಳೂರು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಪುತ್ತೂರು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್, ಸುಳ್ಯ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ದೇರಣ್ಣ ಗೌಡ, ಸುಳ್ಯ ನ.ಪಂ. ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ವಿನಯಕುಮಾರ್ ಕಂದಡ್ಕ, ಸುಳ್ಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ.ಪಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು. ನ.ಪಂ. ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಸ್ವಾಗತಿಸಿದರು. ಶ್ರೀದೇವಿ ನಾಗರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಹಾಗೂ ಸಾರ್ವಜನಿಕರು ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಳ್ಯದ ಭಾವನ ಬಳಗ ತಂಡದವರಿಂದ ದೇಶ ಭಕ್ತಿ ಗೀತ ಗಾಯನ ಕಾರ್ಯಕ್ರಮ ನಡೆಯಿತು.