ಸಮಗ್ರ ನ್ಯೂಸ್: ಯುವಕನೊಬ್ಬ
ರಸ್ತೆ ಬದಿಯಲ್ಲೇ ಕಾರು ನಿಲ್ಲಿಸಿ ಯುವತಿಯೊಬ್ಬಳೊಡನೆ ಹಾಡಹಗಲಿನಲ್ಲೇ ಸಂಭೋಗ ನಡೆಸುತ್ತಿದ್ದ ವೇಳೆ ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಕಾರು ಹತ್ತಿಸಿ ಕೊಲ್ಲಲು ಯತ್ನಿಸಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಗಾಯಗೊಂಡ ಪೊಲೀಸ್ ಸಿಬ್ಬಂದಿ ಮಹೇಶ್ ಖಾಸಗಿ ಆಸ್ಪತೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೀಸಲು ಪಡೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹೇಶ್ ಶನಿವಾರ ಉಪಕಾರ್ ಲೇಔಟ್ ನಲ್ಲಿದ್ದ ತಮ್ಮ ಮನೆಯ ಬಳಿ KA 02 MR 8102 ನೋಂದಣಿಯ ಕಾರೊಂದರಲ್ಲಿ ಅಸಹಜವಾದ ಚಟುವಟಿಕೆ ನಡೆಯುತ್ತಿರುವುದನ್ನು ಗಮನಿಸಿದ್ದರು. ಕಾರ್ ಬಳಿ ತೆರಳಿದಾಗ ಯುವಕನೊಬ್ಬ ಯುವತಿಯೊಬ್ಬಳೊಡನೆ ಸಂಭೋಗ ನಡೆಸುತ್ತಿರುವ ದೃಶ್ಯ ಕಂಡುಬಂದಿತ್ತು.
ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ಜನವಸತಿ ಸ್ಥಳದಲ್ಲಿ ಈ ರೀತಿಯ ವರ್ತನೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದಾಗ ಯುವಕ ಕೂಡಲೇ ಕಾರನ್ನು ಮಹೇಶ್ ಅವರ ಮೇಲೆ ಹತ್ತಿಸಿದ್ದ. ಸುಮಾರು 500 ಮೀಟರ್ ದೂರ ಮಹೇಶ್ ಅವರನ್ನು ಎಳೆದೊಯ್ದ ಆರೋಪಿ ಬಳಿಕ ಅವರನ್ನು ಬದಿಗೆ ಕೆಡವಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಮಹೇಶ್ ಅವರ ಮೊಬೈಲ್ ಕಾರಿನ ವೈಪರ್ ಗೆ ಸಿಲುಕಿಕೊಂಡಿತ್ತು. ತನ್ನನ್ನು ಹಿಂಬಾಲಿಸಲು ಬಂದವರ ಮೇಲೂ ಕಾರು ಹತ್ತಿಸಿ ಅಪಘಾತ ಮಾಡಲು ಯತ್ನಿಸಿದ್ದ.
ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಮಹೇಶ್ ಅವರನ್ನು ಸ್ಥಳೀಯರು ಸಮೀಪದ ಖಾಗಿಸ ಆಸ್ಪತ್ರೆಗೆ ವರ್ಗಾಯಿಸಿದ್ದರು. ಮಹೇಶ್ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದೇ ವೇಳೆ ಅಪಘಾತ ಎಸಗಿದ್ದ ಯುವಕ ರೋಹನ್ ಪೊಲೀಸ್ ಠಾಣೆಗೆ ತೆರಳಿ ಮಹೇಶ್ ಅವರ ಮೊಬೈಲ್ ಕೊಟ್ಟು ಅಲ್ಲಿಂದ ಪರಾರಿಯಾಗಿದ್ದ. ಸ್ಥಳೀಯ ಸಿಸಿಟಿವಿ ಕೆಮೆರಾ ಹಾಗೂ ಮಹೇಶ್ ಅವರ ಹೇಳಿಕೆಯನ್ನು ಆಧರಿಸಿ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ.