ಸಮಗ್ರ ನ್ಯೂಸ್: ಸುಳ್ಯದ ಕಳಂಜ ಗ್ರಾಮದ ಅಯ್ಯನಕಟ್ಟೆಯಲ್ಲಿ ನೂತನವಾಗಿ ಗೋಕುಲ ಸಂಕೀರ್ಣದಲ್ಲಿ ನಿರ್ಮಿಸಿರುವ ಡಾ. ಕಿಶನ್ ರಾವ್ ಬಾಳಿಲ ಇವರ ನೇತೃತ್ವದಲ್ಲಿ ಡಾ. ಎನ್. ಗೋಪಾಲಕೃಷ್ಣಯ್ಯ (N.G.K.) ಸ್ಮಾರಕ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ಜ. 21ರಂದು ಉದ್ಘಾಟನೆಗೊಂಡಿತು.
ಕುಟುಂಬ ವೈದ್ಯರ ಸಂಘ, ಮಂಗಳೂರು ಇದರ ಕಾರ್ಯದರ್ಶಿ ಡಾ| ಜಿ.ಕೆ. ಭಟ್ ಸಂಕಬಿತ್ತಿಲು ದೀಪ ಬೆಳಗಿಸಿ ಉದ್ಘಾಟಿಸಿದರು. ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ| ಮುರಲೀಮೋಹನ ಚೂಂತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ| ನಂದಕುಮಾರ್ ಬಿ., ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ಸಂಚಾಲಕ ಎಂ. ಪಿ. ಉಮೇಶ್, ಕೆಯ್ಯೂರು ಶ್ರೀ ದೇವಿ ಕ್ಲಿನಿಕ್ ನ ವೈದ್ಯ ಡಾ| ಶಿವಪ್ರಸಾದ್ ಶೆಟ್ಟಿ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಮ್ಮ ಆರೋಗ್ಯಧಾಮದಲ್ಲಿ ತಜ್ಞ ವೈದ್ಯಕೀಯ ಸಲಹೆ, ವೈಯುಕ್ತಿಕ ಸಮಾಲೋಚನೆ, ಡೇ-ಕೇರ್ ಚಿಕಿತ್ಸೆ, ತುರ್ತು ಚಿಕಿತ್ಸೆ, ಪ್ರಾಥಮಿಕ ಚಿಕಿತ್ಸೆ, ಶಸ್ತ್ರಚಿಕಿತ್ಸಾ ಕೊಠಡಿ, ಕ್ಲಿನಿಕಲ್ ಲ್ಯಾಬೋರೇಟರಿ, ಔಷಧಿಗಳು, ಫಿಸಿಯೋಥೆರಪಿ, ಅಂಬ್ಯುಲೆನ್ಸ್ ಸರ್ವೀಸ್ ಲಭ್ಯವಿರಲಿದೆ. ವೈದ್ಯನಾಗಿ ಪದವಿ ಪಡೆದು ನಮ್ಮ ಊರಿನವರಿಗೇ ಮೊದಲಾಗಿ ಸೇವೆ ಲಭಿಸಬೇಕೆನ್ನುವ ನನ್ನ ತಂದೆ ರಾಮಚಂದ್ರ ರಾವ್ ರವರ ಇಚ್ಚೆ ಇವತ್ತು ಈಡೇರಿದೆ ಎಂದು ಡಾ| ಕಿಶನ್ ರಾವ್ ಹೇಳಿದರು.
ಲೆಫ್ಟಿನೆಂಟ್ ಕಮಾಂಡರ್ ಮುರಳೀಧರ್ ರನ್ನು ಬಾಳಿಲ ರಾಮಚಂದ್ರ ರಾವ್ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು. ಡಾ. ಕಿಶನ್ ರಾವ್ ರನ್ನು ಕಳಂಜ, ಬಾಳಿಲ, ಮುಪ್ಪೇರ್ಯ ಗ್ರಾಮಸ್ಥರ ಪರವಾಗಿ ಬಿ. ಸುಭಾಶ್ಚಂದ್ರ, ಎಂ.ಎಂ. ಸುಧಾಕರ ರೈ ಬಾಳಿಲ, ಶ್ರೀನಾಥ್ ರೈ ಬಾಳಿಲ ಮತ್ತು ರಾಂ ಪ್ರಸಾದ್ ಕಾಂಚೋಡು ಈ ಸಂದರ್ಭದಲ್ಲಿ ಸನ್ಮಾನಿಸಿದರು. ರಾಮಚಂದ್ರ ರಾವ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು. ಮಂಗಳೂರಿನ ವಿವಿಧ ವಿಭಾಗಗಳ ಹಿರಿಯ ತಜ್ಞ ವೈದ್ಯರುಗಳು ಆಗಮಿಸಿ ಸುಮಾರು 2500ರಷ್ಟು ಅಂದಾಜು ವೆಚ್ಚದ ಬ್ಲಡ್ ಶುಗರ್, ಬಿಪಿ, ಬೋನ್ ಮಾಸ್ ಡೆನ್ಸಿಟಿ, ಇಸಿಜಿ, ರಿಫ್ರಾಕ್ಷನ್ ಮತ್ತಿತರ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಿಕೊಟ್ಟರು. ಡಾ. ಕಿಶನ್ ರಾವ್ ರವರ ವೈದ್ಯಕೀಯ ತಂಡ, ಕುಟುಂಬಸ್ಥರು, ಬಂಧುಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಕ್ಲಿನಿಕ್ ನಲ್ಲಿ ಡಾ. ಜಯಶ್ರೀ ಭಟ್ ನೆಟ್ಟಾರು ಶಾಂತಿಮೂಲೆ ಪ್ರತಿದಿನ ಲಭ್ಯರಿರಲಿದ್ದಾರೆ. ಉಳಿದಂತೆ ಹೃದ್ರೋಗ ತಜ್ಞ ಡಾ. ಭರತೇಶ್ ಯು.ಜಿ, ಮಂಗಳೂರಿನ ಮೂಳೆ ತಜ್ಞ ಡಾ. ಶ್ರೇಯಸ್ ದೊಡ್ಡಿಹಿತ್ಲು ಮತ್ತು ಡಾ. ಸಚಿನ್ ಶಂಕರ್, ಶಸ್ತ್ರಚಿಕಿತ್ಸಾ ತಜ್ಞ ಡಾ. ಕಿಶನ್ ರಾವ್ ಬಾಳಿಲ, ಮಕ್ಕಳ ತಜ್ಞೆ ಡಾ. ಮಧುಶ್ರೀ, ನ್ಯಾಚುರೋಪತಿ ಮತ್ತು ಅಕ್ಯುಪಂಕ್ಚರ್ ತಜ್ಞ ಡಾ. ಶಶಿಧರ್ ಹಾಸನಡ್ಕ, ನ್ಯಾಚುರೋಪತಿ ತಜ್ಞ ಡಾ. ಗೌತಮ್ ನಿಗದಿತ ದಿನಗಳಲ್ಲಿ ತಪಾಸಣೆಗೆ ಲಭ್ಯರಿರುತ್ತಾರೆ.
ಈ ಭಾಗದಲ್ಲಿ ಜನತೆಗೆ ವೈದ್ಯಕೀಯ ಸೇವೆಯ ಕೊರತೆಯನ್ನು ನಮ್ಮೂರಿನ ಹೆಮ್ಮೆಯ ಮಗ ಡಾ. ಕಿಶನ್ ರಾವ್ ಪೂರೈಸಿದ್ದಾರೆ – ಎಂ.ಪಿ. ಉಮೇಶ್ ಎಂದು ಹೇಳಿ ಶುಭ ಹಾರೈಸಿದರು. ಸಿಂಧೂರ ಬಿ.ಪ್ರಾರ್ಥಿಸಿ, ಡಾ| ಕಿಶನ್ ರಾವ್ ಬಾಳಿಲ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸೌಮ್ಯಶ್ರೀ ಕಿಶನ್ ರಾವ್ ವಂದಿಸಿ, ಸುಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.