ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠೆ ನಡೆಯುವ ಜನವರಿ 22ರಂದು ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಿಸಿದೆ. ರಾಜ್ಯ ಸರ್ಕಾರ ಕೂಡ ರಜೆ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಆದರೆ,ಇದರ ಬಗ್ಗೆ ರಾಜ್ಯ ಸರ್ಕಾರ ಇನ್ನೂ ನಿರ್ಧಾರ ಪ್ರಕಟಿಸಿಲ್ಲ.
ಆದರೆ ಚಿಕ್ಕಮಗಳೂರಿನ ಶಾಲೆಯೊಂದರಲ್ಲಿ ರಾಮಮಂದಿರ ಕಾರ್ಯಕ್ರಮದ ದಿನ ಶಾಲೆಗೆ ರಜೆ ಹಾಕಿದರೆ ದಂಡ ವಿಧಿಸಲಾಗುವುದು. ಸೋಮವಾರ ಶಾಲೆಗೆ ರಜೆ ಮಾಡಿದರೆ 1000 ರೂ. ದಂಡ ತೆರಬೇಕಾಗುತ್ತದೆ ಎಂದು ಚಿಕ್ಕಮಗಳೂರು ನಗರದ ಸೇಂಟ್ ಜೋಸೆಫ್ ಶಾಲಾ ಮಂಡಳಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ. ಸೇಂಟ್ ಜೋಸೆಫ್ ಶಾಲಾ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆಡಳಿತ ಮಂಡಳಿಯ ವಿರುದ್ಧ ಭಜರಂಗದಳ, ವಿಹೆಚ್ಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಯ ಎದುರು ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನವರಿ 22ರಂದು ಗುಜರಾತ್, ಮಹಾರಷ್ಟ್ರ ಸೇರಿದಂತೆ ಹಲವು ರಾಜ್ಯಗಳು ರಜೆ ಘೋಷಣೆ ಮಾಡಿವೆ. ಕೇಂದ್ರ ಸರ್ಕಾರ ಕೂಡ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ನೀಡಿದೆ. ರಾಮ ಮಂದಿರ ಉದ್ಘಾಟನೆಯನ್ನು ಇಡೀ ದೇಶದ ಜನ ಉತ್ಸವದ ರೀತಿ ಆಚರಿಸುವಂತೆ ಕರೆ ನಿಡಲಾಗಿದೆ. ಕರ್ನಾಟಕದಲ್ಲಿಯೂ ರಜೆ ನೀಡಬೇಕೆಂಬ ಆಗ್ರಹ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಹಾಗೂ ಹಿಂದೂ ಪರ ಸಂಘಟನೆಗಳಿಂದ ವ್ಯಕ್ತವಾಗಿದೆ. ಆದರೆ, ಈ ವಿಚಾರವಾಗಿ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ
ದಂಡ ವಿಧಿಸುವುದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸೆಂಟ್ ಜೋಸೆಫ್ ಶಾಲೆಯ ಪ್ರಿನ್ಸಿಪಾಲ್ ಜೀನ್ ಸ್ಪಷ್ಟನೆ ನೀಡಿದ್ದಾರೆ. ಪ್ರತಿ ನಿತ್ಯ ವಿದ್ಯಾರ್ಥಿಗಳಿಗೆ ಹೇಳುವಂತೆ ಹೇಳಿದ್ದೇನೆಯೇ ಹೊರತು ಅಯೋಧ್ಯೆ ರಾಮ ಮಂದಿರ ಕಾರ್ಯಕ್ರಮದ ದೃಷ್ಟಿಯಲ್ಲಿ ಹೇಳಿಲ್ಲ. ವಿದ್ಯಾರ್ಥಿಗಳು ಶಾಲೆಗೆ ರಜೆ ಮಾಡದಂತೆ ಹೇಳಿದ್ದೇನೆ. ಯಾವ ವಿದ್ಯಾರ್ಥಿಗಳಿಗೂ ದಂಡ ಹಾಕುವುದಾಗಿ ನಾನು ಆದೇಶ ಮಾಡಿಲ್ಲ. ಸಾಲು ಸಾಲು ರಜೆ ಇದ್ದಾಗ ನಾನು ಪ್ರತಿ ಬಾರಿಯೂ ವಿದ್ಯಾರ್ಥಿಗಳಿಗೆ ರಜೆ ಮಾಡದಂತೆ ಹೇಳುತ್ತೇನೆ. ಎಲ್ಲ ವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ನೋಡಲಾಗುತ್ತಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಈ ವಿಚಾರಕ್ಕೆ ಕಾರಣವಾಗಿ ಸೆಂಟ್ ಜೋಸೆಫ್ ಶಾಲೆಗೆ ಡಿಡಿಪಿಐ ಪ್ರಕಾಶ್ ಭೇಟಿ ನೀಡಿದ್ದು, ಶಾಲಾ ಆಡಳಿತ ಮಂಡಳಿಯ ಜೊತೆ ಸಭೆ ನಡೆಸಿದ್ದಾರೆ.