ಸಮಗ್ರ ನ್ಯೂಸ್:ನಂಜನಗೂಡು ಕಪಿಲಾ ನದಿಯಲ್ಲಿ ಮೂವರು ಅಯ್ಯಪ್ಪ ಮಾಲಾಧಾರಿಗಳ ಕೊಚ್ಚಿಹೋದ ಘಟನೆ ನಡೆದಿದೆ. ಓರ್ವನನ್ನು ರಕ್ಷಣೆ ಮಾಡಿದ್ದು, ಮತ್ತೋರ್ವನ ಮೃತ ದೇಹ ಪತ್ತೆಯಾಗಿದೆ. ಇನ್ನು ಮಗದೋರ್ವನಿಗಾಗಿ ಹುಡುಕಾಟ ಮುಂದುವರೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗವಿರಂಗ, ರಾಕೇಶ್ (19), ಅಪ್ಪು (16) ನೀರು ಪಾಲಾಗಿದ್ದರು. ಇದೀಗ ಗವಿರಂಗ ಎಂಬುವರನ್ನು ರಕ್ಷಣೆ ಮಾಡಲಾಗಿದೆ. ಬಾಲಕ ಅಪ್ಪು ಮೃತ ದೇಹ ಪತ್ತೆಯಾಗಿದೆ. ಇವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಎಂಟು ಜನ ಅಯ್ಯಪ್ಪ ಮಾಲಾಧಾರಿಗಳು ಕಳೆದ ಮೂರು ದಿನಗಳ ಹಿಂದೆ ಶಬರಿ ಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಮುಗಿಸಿಕೊಂಡು ಮಾಲಧಾರಿಗಳು ನಂಜನಗೂಡಿಗೆ ಬಂದಿದ್ದಾರೆ. ಇಲ್ಲೇ ಮಾಲೆ ತೆಗೆದಯಲು ನಿಶ್ಚಯಿಸಿದ್ದರು. ಹೀಗಾಗಿ ಐವರು ಕಪಿಲಾ ನದಿಯ ಹೆಜ್ಜಿಗೆ ಸೇತುವೆ ಬಳಿ ಸ್ನಾನಕ್ಕೆ ಹೋಗಿದ್ದರು. ಸ್ನಾನ ಮಾಡುವಾಗ ಮೂವರು ನೀರು ಪಾಲಾಗಿದ್ದಾರೆ. ಇಬ್ಬರು ಈಜಿ ದಡ ಸೇರಿದ್ದಾರೆ. ಬಳಿಕ ಅಗ್ನಿಶಾಮಕದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.