ಸಮಗ್ರ ನ್ಯೂಸ್: 8 ವರ್ಷಗಳ ನಂತರ ಆಳವಾದ ಸಮುದ್ರದಲ್ಲಿ ನಾಪತ್ತೆಯಾಗಿದ್ದ ವಿಮಾನ ಇದೀಗ ಪತ್ತೆಯಾಗಿದೆ. AN-32-2743 ವಿಮಾನ ಚೆನ್ನೈ ನೌಕಾನೆಲೆಯಿಂದ 310 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ವಾಯು ಸೇನೆ ಮೂಲಗಳಿಂದ ಅಧಿಕೃತ ಮಾಹಿತಿ ನೀಡಲಾಗಿದೆ.
2016ರ ಜುಲೈ 22 ರಂದು ಚೆನ್ನೈನ ತಾಂಬರಂ ವಾಯುನೆಲೆಯಿಂದ ಬೆಳಗ್ಗೆ 8.30ಕ್ಕೆ ಹೊರಟಿದ್ದ AN-32-2743 ವಿಮಾನ, ಬೆಳಗ್ಗೆ 9.12ಕ್ಕೆ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್ಬ್ಲೇರ್ ತಲುಪಬೇಕಿತ್ತು. ಮಧ್ಯಾಹ್ನ 1.50ಕ್ಕೆ ವಿಮಾನ ಕಣ್ಮರೆಯಾಗಿದೆ ಎಂದು IAF ಪ್ರಕಟಣೆಯಲ್ಲಿ ತಿಳಿಸಿತ್ತು.
ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಯೋಧ ಏಕನಾಥಶೆಟ್ಟಿ ಸೇರಿದಂತೆ 29 ಜನರಿದ್ದರು. ವಿಮಾನದಲ್ಲಿ ನಾಪತ್ತೆಯಾಗಿದ್ದ ಸೈನಿಕ ಏಕನಾಥ್ ಶೆಟ್ಟಿ, ಕಾರ್ಗಿಲ್ ವಾರ್ನಲ್ಲಿ ಭಾಗವಹಿಸಿದ್ದ ಹೆಮ್ಮೆಯ ಯೋಧರಾಗಿದ್ದರು.
ಪತ್ತೆಗಾಗಿ ಕೇಂದ್ರ ಸರಕಾರ ಹಾಗೂ ಮಿಲಿಟರಿ ತಜ್ಞರು ಸತತ ಮೂರು ತಿಂಗಳಿಂದ ಪ್ರಯತ್ನ ವಿಫಲವಾಗಿತ್ತು. ಇದಕ್ಕಾಗಿ ಪಿ-8ಎ ವಿಮಾನ, 3 ಡೋರ್ನಿಯರ್ ವಿಮಾನ, ಒಂದು ಜಲಂತರ್ಗಾಮಿ, ನೌಕಾಸೇನೆಯ 12 ನೌಕೆಗಳನ್ನು ಬಳಸಲಾಗಿತ್ತು. ಆದರೆ ಕುರುವೇ ಇಲ್ಲದಂತೆ ನಾಪತ್ತೆಯಾಗಿದ್ದ ವಿಮಾನವಾಗಿದ್ದು ಇಂದು ಪತ್ತೆಯಾಗಿದೆ.