ಸಮಗ್ರ ನ್ಯೂಸ್: ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಜವರಾಯ ಹೇಗೆ ಬರುತ್ತಾನೋ ತಿಳಿಯಲು ಅಸಾಧ್ಯ. ಸಂಪೂರ್ಣ ಫಿಟ್ನೆಸ್ ಹೊಂದಿದ್ದರೂ ಕೆಲವರು ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಸಾವನ್ನಪ್ಪುತ್ತಿರುವ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿದೆ. ಇದೀಗ ಕ್ರಿಕೆಟ್ ಪಂದ್ಯಾಟ ನಡುವೆಯೇ 36 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾದ ಥಾನಾ ಎಕ್ಸ್ಪ್ರೇಸ್ವೇ ಸೆಕ್ಟರ್-135 ಪ್ರದೇಶದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಉತ್ತರಾಖಂಡ ಮೂಲದ ವಿಕಾಸ್ ನೇಗಿ ಕಣಕ್ಕಿಳಿದಿದ್ದರು. ಬ್ಯಾಟಿಂಗ್ ಮಾಡುತ್ತಿದ್ದಾಗ ವಿಕಾಸ್ ನೇಗಿ ರನ್ ಓಡಿದ್ದರು. ಆದರೆ ಚೆಂಡು ಬೌಂಡರಿ ಲೈನ್ ದಾಟಿತ್ತು. ಹೀಗಾಗಿ ಕ್ರೀಸ್ನ ಮಧ್ಯ ಭಾಗದಿಂದ ಮತ್ತೆ ನಾನ್ ಸ್ಟ್ರೈಕ್ನತ್ತ ಮರಳಲು ಮುಂದಾಗಿದ್ದರು. ಆದರೆ ದಿಢೀರ್ ಕುಸಿತಕ್ಕೊಳಗಾದ ವಿಕಾಸ ನೇಗಿ ಪಿಚ್ ಮೇಲೆ ಬಿದ್ದಿದ್ದಾರೆ. ತಕ್ಷಣವೇ ಎದುರಾಳಿ ತಂಡದ ವಿಕೆಟ್ ಕೀಪರ್ ಹಾಗೂ ಸಹ ಆಟಗಾರ ವಿಕಾಸ್ ನೇಗಿ ಬಳಿ ಓಡಿ ಬಂದಿದ್ದಾರೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲ್ಲೇ ವಿಕಾಸ್ ನೇಗಿ ಮೃತಪಟ್ಟಿದ್ದಾರೆ