ಸಮಗ್ರ ನ್ಯೂಸ್: ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಹೋರಾಟ ನಡೆಸಿ ಜೈಲು ಸೇರಿದ ಕರವೇ ಅಧ್ಯಕ್ಷ ಎ.ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರಿಗೆ ಜಾಮೀನು ಸಿಕ್ಕಿದೆ. ಆದ್ರೆ, ಜಾಮೀನು ಆದೇಶ ಪ್ರತಿ ಜೈಲಾಧಿಕಾರಿಗೆ ಸರಿಯಾದ ಸಮಯಕ್ಕೆ ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಇಂದೂ ಸಹ ನಾರಾಯಣಗೌಡ ಸೇರಿದಂತೆ 29 ಕರವೇ ಕಾರ್ಯಕರ್ತರಿಗೆ ಬಿಡುಗಡೆ ಭಾಗ್ಯವಿಲ್ಲ. ಜಾಮೀನು ಆದೇಶ ಪ್ರತಿ ತಲುಪಿಸುವುದು ವಿಳಂಬವಾಗಿದ್ದರಿಂದ ನಾಳೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಈ ಬಗ್ಗೆ ನಾರಾಯಣಗೌಡ ಪರ ವಕೀಲ ಕುಮಾರ್ ಎಲ್.ಜಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಂಜೆ 6.45 ಕ್ಕೆ ಬೇಲ್ ಕಾಪಿ ಜೈಲಿಗೆ ತಲುಪಿದೆ. ಯಾವುದೇ ವಿಳಂಬ ಆಗದೆ ಬೇಲ್ ಕಾಪಿ ತಲುಪಿದೆ. ರಾತ್ರಿ 10:30ವರೆಗೂ ಹೊರಬಿಡುವ ಕಾಲಾವಕಾಶ ಇದೆ ಲಾ ಆ್ಯಂಡ್ ಆರ್ಡರ್ ಪ್ರಾಬ್ಲಮ್ ಆಗಬಹುದು ಎನ್ನುವ ಕಾರಣಕ್ಕೆ ವಿಳಂಬ ಮಾಡುತ್ತಿರಬಹುದು. ನಾಳೆ ಬೆಳಗ್ಗೆಯೂ ಕೂಡ ಅವರನ್ನು ಬಿಡಬಹುದು ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಳೆ ನಾರಾಯಣಗೌಡ ಮತ್ತೆ ಬಂಧನ ಮಾಡುವ ವಿಚಾರದ ಬಗ್ಗೆ ಮಾತನಾಡಿ, ಹೊರಬಂದ ನಂತರ ಅವರನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಬಹುದು. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಪ್ರಕರಣದಲ್ಲಿ ವಾರೆಂಟ್ ಇದೆ. ಈ ಹಿನ್ನೆಲೆ ಅವರನ್ನು ವಶಕ್ಕೆ ಪಡೆಯಬಹುದು. ವಶಕ್ಕೆ ಪಡೆದರು ಸಹ ನಾವು ನಾಳೆಯೇ ಬೇಲ್ ಮೂಲಕ ಹೊರಗೆ ತರುತ್ತೇವೆ ಎಂದು ಹೇಳಿದರು.
ನಾರಾಯಣಗೌಡ ಅವರನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ. ಈ ಸಂದರ್ಭದಲ್ಲಿ ಏಳು ವರ್ಷದ ಹಳೆಯ ಪ್ರಕರಣದಲ್ಲಿ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇದುವರೆಗೆ ಪೊಲೀಸರು ಯಾಕೆ ಸುಮ್ಮನಿದ್ದರು ಎಂದರು. ಈ ಹಿನ್ನೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರಪ್ಪನ ಅಗ್ರಹಾರ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಆದ್ರೆ, ಆದೇಶ ಪ್ರತಿ ಜೈಲಿನ ಅಧಿಕಾರಿಗಳಿಗೆ ತಲುಪಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.