ಸಮಗ್ರ ನ್ಯೂಸ್: ಭಾರತೀಯ ಹವಾಮಾನ ಇಲಾಖೆಯು, ವಾಯುವ್ಯ, ಮಧ್ಯ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಆಲಿಕಲ್ಲು ಮಳೆ ಮತ್ತು ಸಹಜ ಮಳೆಯಾಗುವ ಮುನ್ಸೂಚನೆ ನೀಡಿದೆ.
ಹವಾಮಾನದಲ್ಲಿ ಉಂಟಾಗುವ ವೈಪರೀತ್ಯವು ವಾಯುವ್ಯ ಮತ್ತು ಮಧ್ಯ ಭಾರತದ ರಾಜ್ಯಗಳ ಮೇಲೆ ಪರಿಣಾಮ ಬೀರಲಿದ್ದು, ಇದರಿಂದಾಗಿ ಜ. 8ರಿಂದ 10ರವರೆಗೆ ಗುಡುಗು, ಆಲಿಕಲ್ಲು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. IMD ಪ್ರಕಾರ, ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ವಾಯವ್ಯ ಭಾರತ, ಮಧ್ಯ ಭಾರತ ಹೊರತುಪಡಿಸಿ ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಮುಂದಿನ 5 ದಿನಗಳ ಕಾಲ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗಲಿದೆ, ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕೇರಳದಲ್ಲಿ 2 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಪ್ರಕಾರ ದಕ್ಷಿಣ ಪೆನಿನ್ಸುಲರ್ ಭಾರತದಲ್ಲೂ ಲಘು ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ರಾಜ್ಯಗಳು, ಅದರಲ್ಲೂ ತಮಿಳುನಾಡಿನ ಮೀನುಗಾರರಿಗೆ ವಿಶೇಷ ಎಚ್ಚರಿಕೆ ನೀಡಲಾಗಿದೆ.
ದೇಶದ ಹಲವು ರಾಜ್ಯಗಳಲ್ಲಿ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಈ ಮಧ್ಯೆ ಇನ್ನೂ ಕೆಲವು ರಾಜ್ಯಗಳಲ್ಲಿ ಮಳೆಯ ಆರ್ಭಟ ಕಮ್ಮಿಯಾಗಿಲ್ಲ. IMD ಪ್ರಕಾರ, ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಮುಂದಿನ 2 ರಿಂದ 3 ದಿನಗಳವರೆಗೆ ಶೀತ ವಾತಾವರಣವು ಮುಂದುವರಿಯುವ ಸಾಧ್ಯತೆಯಿದೆ.
ಇದಾದ ನಂತರ ಮೇಲಿನ ರಾಜ್ಯಗಳಲ್ಲಿ ಹಂತಹಂತವಾಗಿ ಕಡಿಮೆಯಾಗಬಹುದು. ಇದರಿಂದಾಗಿ ಈ ರಾಜ್ಯಗಳಲ್ಲಿ ಜನವರಿ 8-9ರವರೆಗೆ ತೀವ್ರ ಚಳಿಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ಪ್ರಕಾರ, ಮುಂದಿನ ಎರಡು ದಿನಗಳವರೆಗೆ ವಾಯುವ್ಯ ಭಾರತದಲ್ಲಿ ದಟ್ಟವಾದ ಮಂಜು ಇರುತ್ತದೆ ಮತ್ತು ಕ್ರಮೇಣ ಕಡಿಮೆಯಾಗುತ್ತದೆ ಎಂದು ಅಂದಾಜಿಸಿದೆ.