ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯರ (Indians) ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿ ಕೋಟ್ಯಂತರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಮಾಲ್ಡೀವ್ಸ್ನ ಮೂವರು ಸಚಿವರನ್ನು ಅಲ್ಲಿನ ಸರ್ಕಾರ ಇಂದು (ಜ.7) ಅಮಾನತುಗೊಳಿಸಿದೆ.
ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಮರಿಯುಂ ಶಿಯುನಾ, ಮಾಲ್ಶಾ ಮತ್ತು ಹಸನ್ ಜಿಹಾನ್ ಎಂಬ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತು ಮಾಡಿ ಕ್ರಮ ಕೈಗೊಂಡಿದೆ. ಸಚಿವರ ವೈಯಕ್ತಿಕ ಹೇಳಿಕೆ ಇಡೀ ಸರ್ಕಾರದ ಹೇಳಿಕೆಯಲ್ಲ ಎಂದಿದ್ದ ಸರ್ಕಾರ, ಇದರ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.
ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದ ಬೆನ್ನಲ್ಲೇ ಕೋಟ್ಯಂತರ ಭಾರತೀಯರು ಬಾಯ್ಕಾಟ್ ಮಾಲ್ಡೀವ್ಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿದ್ದರು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿ ಹಲವು ಸೆಲೆಬ್ರಿಟಿಗಳು ಮಾಲ್ಡೀವ್ಸ್ ಸಚಿವರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದರ ಬೆನ್ನಲ್ಲೇ ಕೆಲವರ ವೈಯಕ್ತಿಕ ಅಭಿಪ್ರಾಯಗಳಷ್ಟೇ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಅವರು ಪ್ರತಿನಿಧಿಸುವುದಿಲ್ಲ ಎಂದು ಮಾಲೆ ಹೊರಡಿಸಿದ ಅಧಿಕೃತ ಹೇಳಿಕೆ ತಿಳಿಸಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಜಾಸತ್ತಾತ್ಮಕ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಚಲಾಯಿಸಬೇಕು ಮಾಲ್ಡೀವ್ಸ್ ಸರ್ಕಾರ ನಂಬುವುದಾಗಿ ತಿಳಿಸಿದೆ. ಅಲ್ಲದೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಸರ್ಕಾರದ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಮಾಲ್ಡೀವ್ಸ್ ಸಚಿವೆ ಮರಿಯಮ್ ಶೆಯುನಾ , ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಇಸ್ರೇಲಿ ಕೈಗೊಂಬೆ’ಗೆ ಎಂದು ಕರೆದಿದ್ದರು. ಉಳಿದ ಮಂತ್ರಿಗಳು ಭಾರತದ ಪ್ರವಾಸೋದ್ಯಮವನ್ನು ಮಾಲ್ಡೀವ್ಸ್ ಪ್ರವಾಸೋದ್ಯಮದೊಂದಿಗೆ ಹೋಲಿಸಿ ವ್ಯಂಗ್ಯಭರಿತ ಪೋಸ್ಟ್‌ಗಳನ್ನು ಮಾಡಿ ಅವಹೇಳನ ಮಾಡಿದ್ದರು. ಮಾಲ್ಡೀವ್ಸ್ ಸಚಿವರ ವಿವಾದಾತ್ಮಕ ಟ್ವೀಟ್‌ಗೆ ಭಾರತೀಯ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಾಲ್ಡೀವ್ಸ್ ಪ್ರವಾಸದ ಟಿಕೆಟ್ಗಳನ್ನು ರದ್ದುಗೊಳಿಸುತ್ತಿರುವ ಸ್ಕ್ರೀನ್ಶಾಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಭಾರತೀಯರ ಆಕ್ಷೇಪದ ಬೆನ್ನಲ್ಲೇ ಸಚಿವೆ ಮರಿಯಮ್ ಶಿಯುನಾ ತಮ್ಮ ಟ್ವಿಟರ್(X) ನಿಂದ ತೆಗೆದುಹಾಕಿದ್ದಾರೆ. ಅಲ್ಲದೆ ಮಾಲ್ಡೀವ್ಸ್ ಬಹಿಷ್ಕಾರಕ್ಕಾಗಿ ಅನೇಕ ಜನರು ಒತ್ತಾಯಿಸಿದ್ದಾರೆ.