ಸಮಗ್ರ ನ್ಯೂಸ್: ಕ್ಯಾನ್ಸರ್ ಅಲ್ಲದ ಜೊಲ್ಲುರಸದಿಂದ ತುಂಬಿರುವ, ಹೆಚ್ಚಾಗಿ ಕೆಳಗಿನ ತುಟಿಗಳ ಒಳಭಾಗದಲ್ಲಿ ಕಂಡು ಬರುವ ಸಣ್ಣಗುಳ್ಳೆಗಳನ್ನು ಜೊಲ್ಲು ಗುಳ್ಳೆಗಳು ಅಥವಾ ಜೊಲ್ಲು ಚೀಲಗಳು ಎಂದು ಕರೆಯುತ್ತಾರೆ. ಅತೀ ಸುಲಭವಾಗಿ ಗುರುತಿಸಬಹುದಾದ, ಯಾವುದೇ ವಿಶೇಷ ಪರೀಕ್ಷೆಯ ಅಗತ್ಯವಿಲ್ಲದ ಹಾಗೂ ಸುಲಭವಾಗಿ ಚಿಕಿತ್ಸೆ ನೀಡಬಹುದಾದ ಖಾಯಿಲೆ ಇದಾಗಿರುತ್ತದೆ. ಹೆಚ್ಚಾಗಿ ಮಕ್ಕಳಲ್ಲಿ ಈ ಜೊಲ್ಲು ಚೀಲಗಳು ಕಂಡುಬರುತ್ತದೆ. ಮೇಲಿನ ತುಟಿಯಲ್ಲಿ ಕಂಡುಬರುವ ಸಾಧ್ಯತೆ ಇಲ್ಲವೇ ಇಲ್ಲ. ನೂರರಲ್ಲಿ 99 ಶೇಕಡಾ ಕೆಳಗಿನ ತುಟಿಯಲ್ಲಿಯೇ ಕಂಡುಬರುತ್ತದೆ. ವರ್ಷವೊಂದರಲ್ಲಿ ಭಾರತ ದೇಶವೊಂದರಲ್ಲಿಯೇ ಸುಮಾರು 1 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗುತ್ತಾರೆ. ಹೆಚ್ಚಿನ ರೋಗಿಗಳು ಮತ್ತು ಹೆತ್ತವರು ಏನೋ ದೊಡ್ಡ ರೋಗ ಬಂದಿದೆ ಎಂದು ಆತಂಕಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜೊಲ್ಲುರಸಗಳಿಂದ ತುಂಬಿದ ಸಣ್ಣ ಚೀಲ ಇದಾಗಿದ್ದು ತೆಳು ಹಳದಿ ಬಣ್ಣದ ಸ್ವಲ್ಪ ದಪ್ಪಗಿರುವ ಜೊಲ್ಲುರಸ ದ್ರಾವಣ ಇದರಲ್ಲಿ ತುಂಬಿರುತ್ತದೆ.
ಏನಿದು ಜೊಲ್ಲುರಸ ಗ್ರಂಥಿಗಳು?
ಸಾಮಾನ್ಯವಾಗಿ ಮಕ್ಕಳಲ್ಲಿ ಮತ್ತು ಹದಿಹರೆಯವರಲ್ಲಿ ಕಂಡುಬರುವ ಈ ಜೊಲ್ಲುಗುಳ್ಳೆಗಳು ಹೆಚ್ಚಾಗಿ ಮಕ್ಕಳು ಗೊತ್ತಿಲ್ಲದೆ ತುಟಿ ಕಚ್ಚಿಕೊಳ್ಳುವುದರಿಂದ ಬರುತ್ತದೆ. ನಮ್ಮ ಕೆಳಗಿನ ತುಟಿಯ ಒಳಭಾಗದಲ್ಲಿ ನೂರಾರು ಚಿಕ್ಕ ಚಿಕ್ಕ ಜೊಲ್ಲುರಸ ಸ್ರವಿಸುವ ಗ್ರಂಥಿಗಳು ಇರುತ್ತದೆ. ನಮ್ಮ ದೇಹದಲ್ಲಿ ಪೆರೋಟಿಡ್, ಸಬ್‍ಲಿಂಗ್ವಲ್ ಮತ್ತು ಸಬ್ ಮ್ಯಾಂಡಿಬುಲಾರ್ ಎಂಬುದಾಗಿ ಮೂರು ಜೊತೆ ದೊಡ್ಡ ಜೊಲ್ಲುರಸ ಗ್ರಂಥಿಗಳು ಇರುತ್ತದೆ. ಇದರ ಜೊತೆಗೆ ನೂರಾರು ಸಣ್ಣ ಪುಟ್ಟ ಜೊಲ್ಲು ರಸಗ್ರಂಥಿಗಳು ತುಟಿಯ ಒಳಭಾಗದಲ್ಲಿ, ಅಂಗಳದಲ್ಲಿ, ಕೆನ್ನೆಯ ಒಳಭಾಗದಲ್ಲಿ ಮತ್ತು ನಾಲಗೆಯಲ್ಲಿ ಇರುತ್ತದೆ. ಇವುಗಳು ಕೂಡಾ ಜೊಲ್ಲುರಸ ಸ್ರವಿಸುತ್ತದೆ ದಿನವೊಂದಕ್ಕೆ ಸುಮಾರು 1 ರಿಂದ 1.5 ಲೀಟರ್‍ನಷ್ಟು ಜೊಲ್ಲುರಸ ಸ್ರವಿಸಲ್ಪಡುತ್ತದೆ. ಇದರ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ವ್ಯಕ್ತಿಯ ದೇಹ ಪ್ರಕೃತಿ, ಔಷಧಿಗಳ ಸೇವನೆ, ಇತರ ರೋಗಗಳ ಉಪಸ್ಥಿತಿ ಮತ್ತು ಆಲ್ಕೋಹಾಲ್ ಸೇವನೆ ಮುಂತಾದವುಗಳ ಮೇಲೆ ಜೊಲ್ಲುರಸದ ಪ್ರಮಾಣ ಅವಲಂಬಿತವಾಗಿರುತ್ತದೆ.
ಜೊಲ್ಲುಗುಳ್ಳೆಗಳಲ್ಲಿ ಎರಡು ವಿಧಗಳಿವೆ. ಕೆಲವೊಮ್ಮೆ ಈ ಸಣ್ಣ ಜೊಲ್ಲುರಸ ಗ್ರಂಥಿಗಳ ಜೊಲ್ಲುರಸನಳಿಕೆಗಳು ಒಡೆದು ಹೋಗಿ, ಜೊಲ್ಲುರಸ ಹೊರ ಬಂದು ಗುಳ್ಳೆಗಳ ರೀತಿಯಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ತೆಳು ಗುಲಾಬಿ ಅಥವಾ ನೀಲಿ ಬಣ್ಣದ ಗುಳ್ಳೆಗಳು ಕಂಡುಬರುತ್ತದೆ. ಹೆಚ್ಚಾಗಿ ಗಾಯದಿಂದ ಈ ಜೊಳ್ಳು ಗುಳ್ಳೆಗಳು ಉಂಟಾಗುತ್ತದೆ. ಇದು ಹೆಚ್ಚಾಗಿ ಸಣ್ಣ ಸಣ್ಣ ಜೊಳ್ಳು ಗ್ರಂಥಿಗಳಲ್ಲಿ ಮಾತ್ರ ಕಾಣಿಸುತ್ತದೆ. ಇದನ್ನು ಅಂಗ್ಲಭಾಷೆಯಲ್ಲಿ ‘ಮ್ಯಾಕೋಸೀಲ್’ ಎನ್ನುತ್ತಾರೆ. ಇನ್ನು ಕೆಲವೊಮ್ಮೆ ದೊಡ್ಡ ಜೊಲ್ಲುರಸ ಗ್ರಂಥಿಗಳ ಜೊಲ್ಲುನಳಿಕೆಗಳು ಮುಚ್ಚಿಕೊಂಡು ಜೊಲ್ಲುರಸ ಸ್ರವಿಸುವಿಕೆಗೆ ಅಡ್ಡಿಯಾಗುತ್ತದೆ. ಹೆಚ್ಚಾಗಿ ಬ್ಯಾಕ್ಟೀರಿಯಾ ಸೋಂಕು ಅಥವಾ ಜೊಲ್ಲುರಸಗ್ರಂಥಿಗಳ ಕಲ್ಲುಗಳಿಂದ ಈ ಅಡಚಣೆ ಕಂಡುಬರುತ್ತದೆ. ಸಬ್ ಲಿಂಗ್ವಲ್ ಜೊಲ್ಲುರಸ ಗ್ರಂಥಿಗಳ ಜೊಲ್ಲುನಳಿಕೆಗಳು ಮುಚ್ಚಿಕೊಂಡು ಜೊಲ್ಲುರಸಗಳ ಶೇಖರಣೆಯಾಗಿ ದೊಡ್ಡ ಜೊಲ್ಲುಗುಳ್ಳೆಗಳು ನಾಲಗೆಯ ಕೆಲಭಾಗದಲ್ಲಿ ಕಂಡುಬರುತ್ತದೆ. ಇದನ್ನು ‘ರಾನುಲಾ’ ಎಂದೂ ಕರೆಯುತ್ತಾರೆ. ಇದು ಸಣ್ಣ ಸಣ್ಣ ಕಪ್ಪೆಗಳ ಆಕೃತಿಯಲ್ಲಿ ಇರುವುದರಿಂದ ಈ ಹೆಸರು ಬಂದಿದೆ. ಕೆಲವೊಮ್ಮೆ ಗಲ್ಲದ ಕೆಳಗೂ ಇದರ ಅಸ್ಥಿತವನ್ನು ತೋರ್ಪಡಿಸುತ್ತದೆ. ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿ ಇದನ್ನು ಪತ್ತೆ ಹಚ್ಚಲಾಗುತ್ತದೆ.
ಕಾರಣಗಳು ಏನು?
ಸಾಮಾನ್ಯವಾಗಿ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಈ ಜೊಲ್ಲುಗುಳ್ಳೆಗಳು ಹೆಚ್ಚಾಗಿ ಕಂಡುಬರುತ್ತದೆ. ವಯಸ್ಕರಲ್ಲಿ ಈ ಜೊಲ್ಲುಗುಳ್ಳೆಗಳ ಬಹಳ ವಿರಳ ಮಹಿಳೆಯರಿಗಿಂತ ಪುರುಷರಲ್ಲಿ ಜಾಸ್ತಿ ಕಂಡುಬರುತ್ತದೆ.
- ಮಕ್ಕಳು ತಮಗರಿವಿಲ್ಲದೆಯೇ ತುಟಿ ಕಚ್ಚಿಕೊಂಡಾಗ ಜೊಲ್ಲುರಸ ಗ್ರಂಥಿಗಳಿಗೆ ಹಾಗೂ ಜೊಲ್ಲುನಳಿಕೆಗಳಿಗೆ ಗಾಯವಾಗಿ ಜೊಲ್ಲುರಸ ಸ್ರವಿಸುವಿಕೆಗೆ ಅಡ್ಡಿಯಾದಗ ಜೊಲ್ಲು ಗುಳ್ಳೆಗಳು ಉಂಟಾಗುತ್ತದೆ.
- ಪ್ಯಾಷನ್‍ಗಾಗಿ ತುಟಿ ಮುಚ್ಚಿಸಿಕೊಂಡು ಆಭರಣ ಧರಿಸಿದಾಗ
- ಮಕ್ಕಳು ಆಡುವಾಗ ಎಡವಿ ಬಿದ್ದಾಗ ತುಟಿಗೆ ಗಾಯವಾದಗ
- ಮಕ್ಕಳು ತುಟಿ ಕಚ್ಚುವ ಹವ್ಯಾಸ ಹೊಂದಿರುತ್ತಾರೆ. ಹೀಗೆ ಮಾಡಿದಾಗ ಜೊಲ್ಲುರಸ ಗ್ರಂಥಿಗಳು ಮತ್ತು ನಳಿಕೆಗಳು ಗಾಯಗೊಂಡು ಜೊಲ್ಲು ಗುಳ್ಳೆ ಉಂಟಾಗುತ್ತದೆ.
ಹೇಗೆ ಕಂಡು ಬರುತ್ತದೆ?
ಜೊಲ್ಲು ಗುಳ್ಳೆಗಳು 2 ರಿಂದ 10 ಮಿಲೀ ಮೀಟರ್‍ನಷ್ಟು ಗಾತ್ರದಲ್ಲಿರುತ್ತದೆ. ಸಾಮಾನ್ಯವಾಗಿ ನೋವು ಇರುವುದಿಲ್ಲ. ನೀಲಿ ಬಣ್ಣ ಹೊಂದಿರುತ್ತದೆ. ಬಟಾಣಿ ಕಾಳಿನಷ್ಟು ಗಾತ್ರದಲ್ಲಿರುವ ಈ ಜೊಲ್ಲು ಚೀಲ ಗಾತ್ರವನ್ನು ಬದಲಿಸುತ್ತದೆ. ಜೊಲ್ಲುಗುಳ್ಳೆಗಳು ಒಡೆದು ದಪ್ಪಗಿನ ಹಳದಿ ಬಣ್ಣದ ಜೊಲ್ಲು ದ್ರವ ಹೊರಗೆ ಬರುತ್ತದೆ. ಮತ್ತೆ ಒಂದೆರಡು ದಿನಗಳಲ್ಲಿ ಪುನಃ ಜೊಲ್ಲುರಸ ತುಂಬಿಕೊಂಡು ತನ್ನ ಗಾತ್ರ ಹಿಗ್ಗಿಸುತ್ತದೆ. ಮುಟ್ಟಿದಾಗ ಬಹಳ ಮೆತ್ತಗಿರುತ್ತದೆ, ಯಾವುದೇ ನೋವಿಲ್ಲದ ಕಾರಣ ರೋಗಿಗಳು ವೈದ್ಯರ ಬಳಿ ಬರಲು ಹಿಂಜರಿಯುತ್ತಾರೆ. ಕೆಲವು ರೋಗಿಗಳು ಕ್ಯಾನ್ಸರ್ ಬಂದಿದೆ ಎಂದು ಅನಾವಶ್ಯಕವಾಗಿ ಗಾಬರಿಗೊಳ್ಳುತ್ತಾರೆ.
ಚಿಕಿತ್ಸೆ ಹೇಗೆ?
ಹತ್ತು ಶೇಕಡಾ ಜೊಲ್ಲುಗುಳ್ಳೆಗಳು ತನ್ನಂತಾನೇ ಮಾಯವಾಗುತ್ತದೆ. ಉಳಿದ 90 ಶೇಕಡಾ ಜೊಲ್ಲು ಗುಳ್ಳೆಗಳನ್ನು ಸರ್ಜರಿ ಮುಖಾಂತರ ಕಿತ್ತು ಹಾಕಲಾಗುತ್ತದೆ. ಸಾಮಾನ್ಯವಾಗಿ ಜೊಲ್ಲುನಳಿಕೆಗಳ ಜೊತೆಗೆ ಜೊಲ್ಲು ಗ್ರಂಥಿಗಳನ್ನೂ ಕಿತ್ತು ಹೊಲಿಗೆ ಹಾಕಲಾಗುತ್ತದೆ. ಬರೀ ಜೊಲ್ಲುನಳಿಕೆ ತೆಗೆದಲ್ಲಿ ಪುನಃ ಪುನಃ ಜೊಲ್ಲು ಗುಳ್ಳೆಗಳು ಬರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸಂಪೂರ್ಣವಾಗಿ ಜೊಲ್ಲು ಗ್ರಂಥಿಗಳ ಜೊತೆಗೆ ಜೊಲ್ಲುನಳಿಕೆಯನ್ನು ಕಿತ್ತು ಹಾಕಲಾಗುತ್ತದೆ. ಅತೀ ಚಿಕ್ಕ ಜೊಲ್ಲು ಗುಳ್ಳೆಗಳನ್ನು ಲೇಸರ್ ಚಿಕಿತ್ಸೆ ಮೂಲಕ ತೆಗೆಯಬಹುದು ಎಂದು ಸಂಶೋಧನೆಗಳು ತಿಳಿಸಿದೆ. ಆದರೆ ಲೇಸರ್ ಚಿಕಿತ್ಸೆಗಿಂತ ಸರ್ಜರಿ ಮಾಡಿ ಜೊಲ್ಲುಗುಳ್ಳೆಗಳನ್ನು ಕಿತ್ತು ತೆಗೆಯುವುದು ಸೂಕ್ತ ಎಂದು ಹೆಚ್ಚಿನ ಎಲ್ಲಾ ವೈದ್ಯರು ಒಮ್ಮತದಿಂದ ಒಪ್ಪುತ್ತಾರೆ. ಜೊಲ್ಲು ಗುಳ್ಳೆ ಎನ್ನುವುದು ತೀರಾ ಸಾಮಾನ್ಯವದ ಅಪಾಯಕಾರಿಯಲ್ಲದ ರೋಗವಾಗಿದ್ದು, ಚಿಕಿತ್ಸೆಗೆ ಸುಲಭವಾಗಿ ಸ್ಪಂಧಿಸುತ್ತದೆ. ಹೆತ್ತವರು ಗಾಬರಿಗೊಳ್ಳದೆ ದಂತ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ತೆಗೆದುಕೊಳ್ಳತಕ್ಕದ್ದು.
ಡಾ| ಮರಲೀ ಮೋಹನ್ ಚೂಂತಾರು.
BDS,MDS,DNB,
MBA,FPFA,.
MOSRCSEd (UK)
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು.
9845135786.