ಸಮಗ್ರ ನ್ಯೂಸ್: ದ.ಕ ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿದ್ದ ಆಯೋದ್ಯೆ ಹಾಗೂ ರಾಮನ ಚಿತ್ರವಿರುವ ಬ್ಯಾನರ್ ಹರಿದ ಪ್ರಕರಣವನ್ನು ಕೇವಲ 24 ಗಂಟೆಯೊಳಗಡೆ ಪೊಲೀಸರು ಬೇಧಿಸಿದ್ದಾರೆ. ಸುಳ್ಯ ಪೇಟೆಯಲ್ಲಿರುವ ಸುಮಾರು 40 ಸಿಸಿ ಕ್ಯಾಮೇರಾ ಪೋಟೊಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣದ ಹಿಂದಿನ ನಿಗೂಢತೆಯನ್ನು ಬಯಲು ಮಾಡಿದ್ದಾರೆ.
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜ 22 ರಂದು ನಡೆಯಲಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಟೆ ಕಾರ್ಯಕ್ರಮದ ಪ್ರಚಾರರ್ಥ ಸುಳ್ಯ ಆಟೋ ರಿಕ್ಷಾ ಸಂಘದ ವತಿಯಿಂದ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಬ್ಯಾನರ್ ಆಳವಡಿಸಲಾಗಿತ್ತು. ಸುಳ್ಯ ನಗರದ ಖಾಸಗಿ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಬದಿ ಸುಳ್ಯ ಜಾತ್ರೋತ್ಸವ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ಮತ್ತು ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ ಬಿ.ಎಂ.ಎಸ್.ನ ಬೆಳ್ಳಿಹಬ್ಬ ಸಂಭ್ರಮ ಕಾರ್ಯಕ್ರಮಕ್ಕೆ ಶುಭಕೋರಿ ಅಟೋ ಚಾಲಕರು ಬ್ಯಾನರ್ ಆಳವಡಿಸಿದ್ದರು.
ಜ 5 ರಂದು ರಾತ್ರಿ ಯಾರೋ ಆ ಬ್ಯಾನರ್ ಗೆ ಹಾನಿ ಉಂಟು ಮಾಡಿದ್ದರು. ಈ ಬ್ಯಾನರ್‌ನ ಮಧ್ಯಭಾಗದಲ್ಲಿ ಶ್ರೀರಾಮನ ಫೋಟೋ ಇರುವ ಭಾಗವನ್ನು ಯಾರೋ ಹರಿದು ತೆಗೆದುಕೊಂಡು ಹೋಗಿದ್ದರು. ಇದು ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸ ಒದಗಿಸಿತ್ತು.
ಈ ಘಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕಿ ಭಾಗೀರಥಿ ಮುರುಳ್ಯ ಅವರು ಖಂಡಿಸಿದ್ದರು. ನಳಿನ್ ಅವರು ಈ ಬಗ್ಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜತೆ ಮಾತನಾಡಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದರು. ಸುಳ್ಯ ವೃತ್ತ ನಿರೀಕ್ಷಕರ ಜತೆ ಮುರುಳ್ಯ ಅವರು ಮಾತನಾಡಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಶಕ್ತಿಗಳನ್ನು ನಿಗ್ರಹಿಸಿ ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದ್ದರು
ಬ್ಯಾನರ್ ಅಳವಡಿಸಿದ ಆಟೊ ರಿಕ್ಷಾ ಸಂಘದ ಅದ್ಯಕ್ಷರು ಬ್ಯಾನರ್ ಹರಿದ್ದ ಬಗ್ಗೆ ಜ 6 ರಂದು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೇ ಕೆಲ ಹೊತ್ತಿನಲ್ಲೆ ಘಟನೆಯೂ ರಾಜಕೀಯ ತಿರುವು ಪಡೆದುಕೊಂಡಿದೆ. ಒಂದು ಪಂಥದ ರಾಜಕೀಯ ನಾಯಕರು ಹಾಗೂ ಜನಪ್ರತಿನಿಧಿಗಳ ಕೃತ್ಯ ಎಸಗಿದವರ ಪತ್ತೆಗೆ ಆಗ್ರಹಿಸಿ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದರು. ಕೆಲವು ಸಂಘಟನೆಗಳ ಪ್ರಮುಖರು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸರು ಸುಳ್ಯ ಪೇಟೆಯ ಸುಮಾರು 40 ಸಿಸಿ ಕ್ಯಾಮಾರಗಳ ಪೂಟೇಜ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಈವೇಳೆ ಜ 5 ರಂದು ಮಧ್ಯರಾತ್ರಿ ಮಾನಸಿಕ ಅಸ್ವಸ್ಥನಂತೆ ಕಂಡುಬರುತ್ತಿರುವ ಅಪರಿಚಿತ ವಯಸ್ಸಾದ ವ್ಯಕ್ತಿಯೋರ್ವ, ಆ ಬ್ಯಾನರ್ ಹರಿದು ತನ್ನ ಕೈಯಲ್ಲಿ ಹಿಡಿದುಕೊಂಡು, ಸುಳ್ಯ ಪೇಟೆಯಲ್ಲಿ ಸುತ್ತಾಡಿರುವುದು ಕಂಡು ಬಂದಿರುತ್ತದೆ.
ಅಲ್ಲದೇ ಆತ ಸುಳ್ಯದ ವಿವೇಕನಂದ ಸರ್ಕಲ್ ಬಳಿ ಆ ಹರಿದ ಬ್ಯಾನರ್ ತುಂಡನ್ನು ಇಟ್ಟು ರಾಮನ ಜಪ ಮಾಡಿದ್ದನ್ನು ಸಾರ್ವಜನಿಕರ ನೋಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ಹರಿದ ಬ್ಯಾನರ್ ತುಂಡನ್ನು ಪರಿಶೀಲಿಸಲಾಗಿ ಅಯೋಧ್ಯೆಯ ಪೋಟೋಗಾಗಲಿ ಹಾಗೂ ಶ್ರೀರಾಮನ ಪೋಟೋಗಾಗಲಿ ಯಾವುದೇ ರೀತಿಯ ಹಾನಿಯಾಗಿರುವುದು ಕಂಡುಬಂದಿರುವುದಿಲ್ಲ. ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.