ಸಮಗ್ರ ನ್ಯೂಸ್: ಖ್ಯಾತ ಸಾಹಿತಿ ಪ್ರೊ.ಅಮೃತ ಸೋಮೇಶ್ವರ(89) ಅವರು ಶನಿವಾರ(ಜ.6) ಬೆಳಿಗ್ಗೆ ನಿಧನರಾದರು. ದಕ್ಷಿಣ ಕನ್ನಡ ಜಿಲ್ಲೆಯ ಓರ್ವ ಹಿರಿಯ ಕನ್ನಡ, ತುಳು ಸಾಹಿತಿ, ಯಕ್ಷಗಾನ ಪ್ರಸಂಗಕರ್ತರಾಗಿದ್ದ ಇವರು, ಸಮಾಜಮುಖಿ ಚಂತನೆಯುಳ್ಳ ಓರ್ವ ಸಹೃದಯಿಯಾಗಿದ್ದರು.
ತಮ್ಮ ಬಾಲ್ಯವನ್ನು ಮುಂಬೈಯಲ್ಲಿ ಕಳೆದ ಅಮೃತರು, ಐದು ವರ್ಷವಾಗುವಾಗ ಊರಿಗೆ ಮರಳಿ, ಕೋಟೆಕಾರಿನಲ್ಲಿರುವ ಸ್ಟೆಲ್ಲಾ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವರೆಗೆ ಕಲಿತರು. ನಂತರ ಆನಂದಾಶ್ರಮ ಪ್ರೌಢಶಾಲೆಯಲ್ಲಿ 6ನೇ ತರಗತಿಯ ಕಲಿಕೆ ಮುಂದುವರಿಸಿದ ಅವರು 1954ರಲ್ಲಿ ಎಸೆಸೆಲ್ಸಿ ಉತ್ತೀರ್ಣರಾದರು.
ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಅಮೃತ ಸೋಮೇಶ್ವರ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ ಎಂದು ಹಲವು ಸಾಹಿತಿಗಳು, ಲೇಖಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಅವರ ಮೊದಲ ಕ್ರತಿ ‘ಎಲೆಗಿಳಿ’ ಎಂಬ ಸಣ್ಣಕತೆಗಳ ಸoಕಲನ 1957ರಲ್ಲಿ ಪ್ರಕಟವಾಯಿತು. ರುದ್ರಶಿಲೆ ಸಾಕ್ಷಿ , ಕೆಂಪು ನೆನಪು ಅವರ ಇನ್ನೆರಡು ಸಂಕಲನಗಳು ಪ್ರಕಟವಾದವು. ವನಮಾಲೆ, ಭ್ರಮಣ ಉಪ್ಪು ಗಾಳಿ ಮೊದಲಾದ ಕವನ ಸಂಕಲನ, ತೀರದ ತೆರೆ ಕಾದಂಬರಿ, ಯಕ್ಷಗಾನ ಕೃತಿ ಸಂಪುಟ, ತುಳು ಪಾಡ್ದನದ ಕಥೆಗಳು, ಅವಿಲು, ತುಳು ಬದುಕು, ಯಕ್ಷಗಾನ ಹೆಜ್ಜೆಗುರುತು, ಭಗವತಿ ಆರಾಧನೆ, ಮೋಯ-ಮಲೆಯಾಳ ನಿಘಂಟು ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ತುಳುವಿನಲ್ಲೂ ಬರೆಯಬಲ್ಲ ಅಮೃತರು ‘ತಂಬಿಲ’, ‘ರಂಗಿತ’ ಕವನ ಸಂಗ್ರಹ, ‘ಗೋಂದೋಲ್’, ‘ರಾಯ ರಾವುತೆ’ ಮೊದಲಾದ ನಾಟಕಗಳನ್ನು ಪ್ರಕಟಿಸಿದವರು. ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ ಹಿರಿಮೆ ಇವರದು.
ಇವರ ತಂದೆ ಮುಂಬೈಯಲ್ಲಿ ಜರ್ಮನ್ ರಾಯಭಾರಿ ಕಚೇರಿಯ ಒಬ್ಬ ಅಧಿಕಾರಿಯ ವಾಹನ ಚಾಲಕರಾಗಿದ್ದರು. ಇವರು ಶಾಲಾ ಶಿಕ್ಷಣ ಪಡೆದಿರದಿದ್ದರೂ, ಕುತೂಹಲ ಮತ್ತು ಸ್ವಪ್ರಯತ್ನದಿಂದ 12 ಭಾಷೆಗಳನ್ನು ಕಲಿತಿದ್ದರು. ಅಮೃತರ ತಾಯಿ ಗೃಹಿಣಿಯಾಗಿದ್ದರೂ, ಮಲೆಯಾಳ ಜನಪದ ಕಥನ ಕಾವ್ಯಗಳನ್ನು ಹಾಡಬಲ್ಲವರಾಗಿದ್ದರು.