Ad Widget .

ಪ್ರಧಾನಿಯೊಬ್ಬರ ಪತ್ರಿಕಾಗೋಷ್ಠಿ ನಡೆದು ಬರೋಬ್ಬರಿ ಒಂದು ದಶಕ| ಭಾರತದ ಪಾಲಿಗೆ ಇದೊಂದು ವಿಪರ್ಯಾಸದ ದಾಖಲೆ

ಸಮಗ್ರ ನ್ಯೂಸ್: ಹೌದು, ಜ.3. 2024ಕ್ಕೆ ಭಾರತದ ಪ್ರಧಾನಿಯೊಬ್ಬರು ಪತ್ರಿಕಾಗೋಷ್ಠಿ ನಡೆಸಿ ಬರೋಬ್ಬರಿ ಒಂದು ದಶಕ ಕಳೆದಿದೆ. 2014ರ ಜ.3ರಂದು ಅಂದಿನ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಕೊನೆಯ ಬಾರಿ ಅನ್ ಸ್ಕ್ರಿಪ್ಟ್ ಡ್ ಪತ್ರಿಕಾಗೋಷ್ಠಿ ನಡೆಸಿದ್ದರು. 100 ಹೆಚ್ಚು ಪತ್ರಕರ್ತರ 62ಕ್ಕೂ ಹೆಚ್ಚು ನೇರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಅದಾದ ಬಳಿಕ ಪ್ರಧಾನಿಯೊಬ್ಬರು ಇದುವರೆಗೂ ಪತ್ರಿಕಾಗೋಷ್ಠಿ ನಡೆಸಿಯೇ ಇಲ್ಲ ಎನ್ನುವುದು ಪ್ರಜಾಪ್ರಭುತ್ವ ಭಾರತದ ವಿಪರ್ಯಾಸದ ದಾಖಲೆ!

Ad Widget . Ad Widget .

ಕಳೆದ ಹತ್ತು ವರ್ಷಗಳಲ್ಲಿ ಎಲ್ಲೆಡೆ ಪ್ರಧಾನಿ ಮೋದಿ ಅವರೇ ಆವರಿಸಿದ್ದಾರೆ. ರಾಜಕೀಯದಲ್ಲಿ ಮಾತ್ರವಲ್ಲ, ಶಾಲಾ ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ, ಪೆಟ್ರೋಲ್ ಪಂಪ್‌ಗಳಲ್ಲಿ, ದೊಡ್ಡ ಹೈವೆಗಳಲ್ಲಿ, ಸಣ್ಣ ಹಳ್ಳಿಗಳ ರಸ್ತೆಗಳಲ್ಲಿ, ರಸ್ತೆಗಳೇ ಇಲ್ಲದಿರುವಲ್ಲಿ, ಪೋಸ್ಟರ್‌ಗಳಲ್ಲಿ, ಟಿವಿ ಚಾನಲ್‌ಗಳಲ್ಲಿ, ಪತ್ರಿಕೆಗಳಲ್ಲಿ, ಮೊಬೈಲ್‌ಗಳಲ್ಲಿ, ವಾಟ್ಸ್‌ಆಯಪ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಎಲ್ಲ ಕಡೆ ಕೊನೆಗೆ ಮಂದಿರಗಳಲ್ಲೂ ಅವರೇ ಕಾಣುತ್ತಾರೆ.

Ad Widget . Ad Widget .

ಅಷ್ಟು ಸಾಕಾಗದು ಎಂದು ಈಗ ಅಲ್ಲಲ್ಲಿ ಅವರದೇ ಸೆಲ್ಫಿ ಪಾಯಿಂಟ್ ಕೂಡ ಹಾಕಲಾಗುತ್ತಾ ಇದೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ಮಾತ್ರ ಅವರು ಕಾಣಲೇ ಇಲ್ಲ. ಅದೂ ಒಂದೆರಡಲ್ಲ, ಹತ್ತು ವರ್ಷಗಳ ಕಾಲ ಅವರು ಕಾಣಲಿಲ್ಲ. ಈ ಹತ್ತು ವರ್ಷಗಳಲ್ಲಿ ದೇಶದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ಎದುರಿಸಲಿಲ್ಲ.

ಒಂದು ಕಡೆ ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿ ಮಾಡದ ದಾಖಲೆ, ಇನ್ನೊಂದು ಕಡೆ ಸಾಲು ಸಾಲು ಕೆಲಸಕ್ಕೆ ಬಾರದ ಸ್ಕ್ರಿಪ್ಟೆಡ್ ಸಂದರ್ಶನಗಳ ದಾಖಲೆ. 2019ರಲ್ಲಿ ಮೋದಿಯನ್ನು ಸಂದರ್ಶಿಸಿದ್ದ ನಟ ಅಕ್ಷಯ್ ಕುಮಾರ್ ಮಾವಿನ ಹಣ್ಣಿನ ಬಗ್ಗೆ ಮೋದಿಗೆ ಪ್ರಶ್ನೆ ಕೇಳಿದ್ದು ಹೇಗೆ ನಗೆಪಾಟಲಿಗೆ ಈಡಾಗಿತ್ತು ಎನ್ನುವುದು ಎಲ್ಲರಿಗೆ ಗೊತ್ತಿದೆ.

ಇನ್ನು ಟಿವಿ ಚಾನೆಲ್‌ಗಳ ಆಯಂಕರ್‌ಗಳು ಪ್ರಧಾನಿಗೆ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳು ಅಕ್ಷಯ್ ಕುಮಾರ್ ಕೇಳಿದ ಪ್ರಶ್ನೆಗಳಿಗಿಂತ ಬಾಲಿಶವಾಗಿದ್ದವು.

ಸುಳ್ಳು ಕಥೆಗಳನ್ನು ರಂಜನೀಯವಾಗಿ ಹೇಳುವವರ ಹಿಂಬಾಲಕರು 2014ರಲ್ಲಿ, ಒಬ್ಬ ಪ್ರಧಾನಿಯ ಬಗ್ಗೆ ತೀರಾ ಹಗುರವಾಗಿ ಆಡಿಕೊಳ್ಳುತ್ತಾ ಒಂದು ವ್ಯವಸ್ಥಿತ ಅಪಪ್ರಚಾರ ಅಭಿಯಾನವನ್ನೇ ನಡೆಸಿದರು.

ಶ್ವೇತಭವನದಲ್ಲಿ ಮೋದಿ ಅನಿವಾರ್ಯವಾಗಿ ಪತ್ರಕರ್ತರ ಪ್ರಶ್ನೆ ಎದುರಿಸಬೇಕಾಗಿ ಬಂದ ಸಂದರ್ಭದ ಬಗ್ಗೆ ಬರೆಯುತ್ತ ‘ನ್ಯೂಯಾರ್ಕ್ ಟೈಮ್ಸ್’ ಹೇಳಿರುವ ಹಾಗೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡುವುದೆಂದರೆ ಇಷ್ಟಪಡುವ, ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿ ಸಂದೇಶ ಕೊಡುವ ಮೋದಿ, ಸ್ಕ್ರಿಪ್ಟ್ ಇಲ್ಲದೆ ಏನೇ ಮಾತಾಡುವ ಸಂದರ್ಭವನ್ನು ಅದಕ್ಕೂ ಮೊದಲು ಎದುರಿಸಿದ್ದೇ ಇಲ್ಲ, ಬಹುಶಃ ಮುಂದೆಯೂ ಎದುರಿಸುವುದಿಲ್ಲ. ಯಾಕೆಂದರೆ ಅವರು ಪ್ರಶ್ನೆಗಳನ್ನೇ ಎದುರಿಸಲಾರದವರು. ಪ್ರಶ್ನೆಗಳನ್ನೇ ಸಹಿಸಲಾರದವರು. ಪ್ರಶ್ನಿಸುವವರನ್ನು ಕೂಡ ಸಹಿಸಲಾರರು.

ಮೋದಿಯವರ ಪಕ್ಷ ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಪ್ರಶ್ನೆ ಕೇಳುವ ವರದಿಗಾರರ ಮೇಲೆ ಕೇಸುಗಳ ಮೇಲೆ ಕೇಸು ಬೀಳುತ್ತದೆ. ಮಾಧ್ಯಮ ಸಂಸ್ಥೆಗಳ ಸಂಪಾದಕರ ಮೇಲೆ ಭಯೋತ್ಪಾಕರ ವಿರುದ್ಧ ಹಾಕುವ ಯುಎಪಿಎ ಕೇಸು ಹಾಕಲಾಗುತ್ತದೆ. ಪ್ರಶ್ನೆ ಕೇಳುವ, ವಸ್ತುನಿಷ್ಠ ವರದಿಗಾರಿಕೆಯಲ್ಲಿ ತೊಡಗಿರುವ ಪತ್ರಕರ್ತರು ದೇಶಾದ್ಯಂತ ಅಪಾಯದಲ್ಲಿದ್ದಾರೆ.

ವಿಶ್ವಸಂಸ್ಥೆಯಲ್ಲಿಯೂ ಧ್ವನಿಸುವ ಮಟ್ಟಕ್ಕೆ ದೇಶದ ಪತ್ರಕರ್ತರ ಎದುರು ಕರಾಳ ವಾತಾವರಣವಿದೆ. ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕರಾಗಿರುವ ಪತ್ರಕರ್ತರು ಒಂದೋ ಕೊಲೆಯಾಗುತ್ತಿದ್ದಾರೆ. ಇಲ್ಲವೇ ಹಲ್ಲೆ, ಬೆದರಿಕೆ, ಕೇಸು, ಜೈಲು ಇಂಥವನ್ನು ಎದುರಿಸಬೇಕಾದ ಸ್ಥಿತಿಯಿದೆ.

ದೇಶದ ಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆಯೆಂದರೆ, ಪ್ರಜಾಪ್ರಭುತ್ವವನ್ನು ಕಾಯಬೇಕಿದ್ದ ಸಂಸತ್ತಿನಲ್ಲೇ ಪ್ರಶ್ನೆಗಳನ್ನು ಇಲ್ಲವಾಗಿಸಲಾಗಿದೆ. ಪ್ರಶ್ನಿಸುವ ಸಂಸದರನ್ನು, ಪ್ರತಿಭಟಿಸುವವರನ್ನು ಅಷ್ಟೇ ಅಪ್ರಜಾಸತ್ತಾತ್ಮಕ ರೀತಿಯಲ್ಲಿ ಅಮಾನತುಗೊಳಿಸಿ, ಪ್ರಜಾಪ್ರಭುತ್ವದ ಸೌಧದೊಳಗೆ ವಿಪಕ್ಷಗಳೇ ಇಲ್ಲದಂತೆ ಮಾಡಲಾಗುತ್ತಿದೆ.

ಬೀದಿಗಳಲ್ಲಿಯೂ ಪ್ರತಿಭಟನೆ, ಪ್ರದರ್ಶನ, ಧರಣಿಗಳನ್ನು ಇಲ್ಲವಾಗಿಸಲಾಗಿದೆ. ಪತ್ರಕರ್ತರಂತೂ ಮೊದಲೇ ಪ್ರಶ್ನೆ ಕೇಳುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಪ್ರಶ್ನೆಗಳಿಲ್ಲದ, ಪ್ರದರ್ಶನಗಳಿಲ್ಲದ, ಪ್ರತಿಭಟನೆಗಳಿಲ್ಲದ ವಿಚಿತ್ರ, ವಿನೂತನ ಪ್ರಜಾಪ್ರಭುತ್ವ ನಮ್ಮದಾಗಿದೆ.

ಕಳೆದ 10 ವರ್ಷಗಳಿಂದ ‘ಮಡಿಲ ಮೀಡಿಯಾ’ದ ಅರಚಾಡುವ ಆಯಂಕರ್‌ಗಳು ಪ್ರಧಾನಿಯ ಸೇವೆಯಲ್ಲಿದ್ದು, ಪತ್ರಿಕೋದ್ಯಮವನ್ನು ಕೊಚ್ಚೆಗೆ ತಳ್ಳಿದ್ದಾರೆ. ಈಗ ಮಾಧ್ಯಮಗಳ ಮಾತೇನಿದ್ದರೂ ಮೋದಿಗಾಗಿ ಮಾತ್ರ.

Leave a Comment

Your email address will not be published. Required fields are marked *