ಸಮಗ್ರ ನ್ಯೂಸ್: ಬೆಳಗಾವಿಯಲ್ಲಿ ಒಂದಲ್ಲ ಒಂದು ಘಟನೆ ನಡೆಯುತ್ತಲೇ ಇದೆ. ಈಗ ವಿಚ್ಛೇದನ ನೀಡದಿದ್ದರೆ ಅಶ್ಲೀಲ ವಿಡಿಯೋ, ಫೋಟೋ ವೈರಲ್ ಮಾಡುತ್ತೇನೆ ಎಂದು ತನ್ನ ಪತ್ನಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಮದುವೆಯಾಗಲು ಹೆಂಡತಿಯಿಂದ ವಿಚ್ಛೇದನ ಪಡೆಯಲು ಈ ರೀತಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಬೆಳಗಾವಿ ನಗರದ ನಿವಾಸಿ ಕಿರಣ್ ಪಾಟೀಲ್ ತನ್ನ ಪತ್ನಿಗೆ ವಿಚ್ಛೇದನ ನೀಡಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದನು. ಇದಕ್ಕಾಗಿಯೇ ವಿಚ್ಛೇದನ ನೀಡುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಅಲ್ಲದೆ, ಖಾಸಗಿ ಕ್ಷಣದ ವಿಡಿಯೋ, ಫೋಟೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಗಂಡನ ಬೆದರಿಕೆಯಿಂದ ಪತ್ನಿ ಸಾಕಷ್ಟು ಬಾರಿ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಪತಿ ಕಿರಣ್ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದನು. ಪತ್ನಿಗೆ ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡುವುದನ್ನು ಮುಂದುವರಿಸಿದ್ದನು
ದಿಕ್ಕೆ ತೋಚದಂತಾದಾಗ ಮಹಿಳೆ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾಳೆ. ಜಿಲ್ಲಾ ಸೈಬರ್ ಠಾಣೆಯಲ್ಲಿ ಕೇಸ್ ದಾಖಲಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಿರಣ್ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆತನ ಮೊಬೈಲ್ನಲ್ಲಿ ಪತ್ನಿಯ ಅಶ್ಲೀಲ ವಿಡಿಯೋ, ಫೋಟೋ ಇರುವುದು ಬೆಳಕಿಗೆ ಬಂದಿದೆ.
ಆರೋಪ ಸಾಬೀತಾಗುತ್ತಿದ್ದಂತೆ ಪೊಲೀಸರು ಬಂಧಿಸಲು ಮುಂದಾದಾಗ ಕಿರಣ್ ತಪ್ಪಿಸಿಕೊಂಡು ಓಡಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ಆತನನ್ನ ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಸದ್ಯ ಗುಣಮುಖನಾಗಿ ನಿನ್ನೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಕಿರಣ್ನನ್ನು ಪೊಲೀಸರು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ಡಾ. ಭೀಮಾಶಂಕರ್ ಗುಳೇದ್, ನೊಂದ ಮಹಿಳೆ ನಮ್ಮ ಪೊಲೀಸ್ ಠಾಣೆಗೆ ಬಂದು ತನ್ನ ಗಂಡನಾದ ಕಿರಣ್ ಪಾಟೀಲ್ ಮೇಲೆ ಕೇಸ್ ನೀಡಿದ್ದಳು. ಡೊಮೆಸ್ಟಿಕ್ ವೈಲೆನ್ಸ್ ಕಾನೂನಿನಡಿಯಲ್ಲಿ ಈಗಾಗಲೇ ಕೇಸ್ ದಾಖಲಾಗಿ ಕೋರ್ಟ್ನಲ್ಲಿದೆ. ಈ ನಡುವೆ ಕಿರಣ್ ಪಾಟೀಲ್ ಅವಳ ಜತೆಗೆ ಇದ್ದಾಗ ಕೆಲವು ವಿಡಿಯೋಗಳನ್ನ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು ಎಂದರು.
ಜಿಲ್ಲಾ ಸೈಬರ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆಪಾದಿತನನ್ನ ಠಾಣೆಗೆ ಕರೆದು ತನಿಖೆ ಮಾಡುವಾಗ ಮೊಬೈಲ್ ಪರಿಶೀಲನೆ ಮಾಡಿದ್ದಾರೆ. ಆತನ ಮೊಬೈಲ್ನಲ್ಲಿ ಮಹಿಳೆ ಹೇಳಿದ ಹಾಗೇ ಕೆಲವು ವಿಡಿಯೋ, ಫೋಟೊಗಳು ಸಿಕ್ಕಿವೆ. ಆ ವಿಚಾರವಾಗಿ ಅರೆಸ್ಟ್ ಮಾಡುವಾಗ ಆರೋಪಿ ತಪ್ಪಿಸಿಕೊಂಡು ಓಡಿ ಹೋಗಿದ್ದ. ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಆತನನ್ನ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು. ಇನ್ನೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.