ಸಮಗ್ರ ನ್ಯೂಸ್: ಸಿನಿಮೀಯ ಶೈಲಿಯಲ್ಲಿ ಪ್ರೇಮಿಗಳು ಕಾರಿನಲ್ಲಿ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆಯಾಗಿದ್ದಾರೆ. ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಶಿವಪ್ರಸಾದ್ ಮತ್ತು ಕೊಪ್ಪಳ ಮೂಲದ ಯುವತಿ ಅಮೃತಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವಕ ಕೆಳಜಾತಿಗೆ ಸೇರಿದ್ದಾನೆ ಎಂಬ ಕಾರಣಕ್ಕೆ ಪೋಷಕರು ಮಗಳ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರೇಮಿಗಳು ಮಂಗಳವಾರ ಸಂಜೆ ಓಡಿ ಹೋಗಿ ಸಿರುಗುಪ್ಪ ನಗರದಲ್ಲಿ ಕಾರಿನಲ್ಲಿ ಹಾರ ಬದಲಾಯಿಸಿಕೊಂಡು ವಿವಾಹವಾಗಿದ್ದಾರೆ.
ಬಳಿಕ ತೆಕ್ಕಲುಕೋಟೆ ಠಾಣೆಗೆ ಬಂದು ರಿಜಿಸ್ಟರ್ ಮದುವೆ ಮಾಡಿಸಿ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಆಗ ಪೊಲೀಸರು ಈಗ ಸಮಯ ಮಧ್ಯರಾತ್ರಿ 12 ಗಂಟೆಯಾಗಿದೆ. ಬೆಳಿಗ್ಗೆ ನೋಡೋಣ ಎಂದು ಹೇಳಿ ಯುವತಿ ಅಮೃತಾಳನ್ನು ಬಳ್ಳಾರಿ ಶಾಂತಿಧಾಮ ಸಾಂತ್ವನ ಕೇಂದ್ರದಲ್ಲಿ ತಂದು ಬಿಟ್ಟಿದ್ದಾರೆ. ಈ ವಿಚಾರವನ್ನು ತಿಳಿದ ಅಮೃತಾ ಪೋಷಕರು ಶಾಂತಿಧಾಮ ಸಾಂತ್ವನ ಕೇಂದ್ರಕ್ಕೆ ಬಂದು ಆಕೆಯ ಮನವೊಲಿಸಿದರು. ಪೋಷಕರು ಅಮೃತಾಳಿಗೆ “ನಿನಗೆ ನಾವು ಬೇಕೋ ಅಥವಾ ನಿನ್ನ ಪ್ರಿಯತಮ ಶಿವಪ್ರಸಾದ್ ಬೇಕೋ” ಎಂದು ಕೇಳಿದರು. ಆಗ ಅಮೃತಾ ನೀವೇ ಬೇಕು ಎಂದು ಪೋಷಕರ ಜೊತೆ ಹೊರಡಲು ಸಿದ್ದವಾದ್ದಳು. ಇಷ್ಟರಲ್ಲಿ ಪ್ರಿಯತಮ ಶಿವಪ್ರಸಾದ್ ಮತ್ತು ಆತನ ಪೋಷಕರು ಕೂಡ ಶಾಂತಿಧಾಮಕ್ಕೆ ಬಂದಿದ್ದಾರೆ. ಆ ನಂತರ ಅಮೃತಾ ನನಗೆ ಶಿವಪ್ರಸಾದ್ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಅಮೃತಾಳ ದ್ವಂದ್ವ ಹೇಳಿಕೆಯಿಂದ ಸಾಂತ್ವನ ಕೇಂದ್ರದ ಬಳಿ ಹೈಡ್ರಾಮಾ ಸೃಷ್ಟಿ ಆಗಿದೆ. ಆಗ ಪೋಷಕರು ಅಮೃತಾಳನ್ನು ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಶಿವಪ್ರಸಾದ್ ಮತ್ತು ಅಮೃತಾ ಪೋಷಕರ ನಡುವೆ ಕೆಲ ಕಾಲ ವಾಗ್ವಾದ, ಗಲಾಟೆ ನಡೆಯಿತು.
ಕೊನೆಗೂ ಅಮೃತಾಳನ್ನು ಕಾರಿನಲ್ಲಿ ಕೂರಿಸಿಕೊಂಡು ಪೋಷಕರು ಕರೆದುಕೊಂಡು ಹೋಗಲು ಮುಂದಾದರು. ಆಗ ಶಿವಪ್ರಸಾದ್ ಕಾರನ್ನು ಅಡ್ಡಗಟ್ಟಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪೊಲೀಸರ ಎದುರು ಶಿವಪ್ರಸಾದ್ ನನಗೆ ಹೆಂಡತಿ ಬೇಕು ಮತ್ತು ರಕ್ಷಣೆ ನೀಡುವಂತೆ ಪಟ್ಟು ಹಿಡಿದನು. ಈ ಸಂಬಂಧ ಶಿವಪ್ರಸಾದ್ ರಾತ್ರಿಯಿಡೀ ಸಾಂತ್ವನ ಕೇಂದ್ರದ ಬಳಿಯೇ ಕುಳಿತಿದ್ದನು. ಕೊನೆಗೆ ಅಮೃತಾ ಪೋಷಕರು ಆಕೆಯನ್ನು ಶಿವಪ್ರಸಾದ್ ಬಳಿ ಬಿಟ್ಟು ಹೋಗಿದ್ದಾರೆ.