Ad Widget .

ವಿದ್ಯುತ್ ದರದಲ್ಲಿ ಅಲ್ಪಪ್ರಮಾಣದ ಇಳಿಕೆ !

ಸಮಗ್ರ ನ್ಯೂಸ್: ಗ್ರಾಹಕರು ಬಳಸಿದ ವಿದ್ಯುತ್‌ಗೆ ಜನವರಿ ತಿಂಗಳಲ್ಲಿ ನೀಡಲಿರುವ ಬಿಲ್ ಮೊತ್ತದಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಲಿದೆ. ಗ್ರಾಹಕರಿಗೆ ಎಸ್ಕಾಂಗಳು ಹೊಸ ವರ್ಷದ ಕೊಡುಗೆಯಾಗಿ ನೀಡಿದಂತಾಗಿದೆ.
ಆದರೆ ವಿದ್ಯುತ್ ದರ ಕಡಿತವು ಮಾರುಕಟ್ಟೆ ಏರಿಳಿತವನ್ನು ಅವಲಂಬಿಸಿದೆ. ಹೀಗಾಗಿ ಜನವರಿ ನಂತರದ ತಿಂಗಳ ಬಿಲ್‌ನಲ್ಲೂ ಇಳಿಕೆ ಅಥವಾ ಏರಿಕೆ ಖಚಿತಪಡಿಸುವುದು ಸಾಧ್ಯವಿಲ್ಲ ಎಂದು ವಿದ್ಯುತ್ ಸರಬರಾಜು ಕಂಪನಿ ಮೂಲಗಳು ಹೇಳುತ್ತವೆ.

Ad Widget . Ad Widget .

ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕದ ಲಾಭವು ಗ್ರಾಹಕರಿಗೆ ವಿದ್ಯುತ್ ದರ ಕಡಿಮೆ ರೂಪದಲ್ಲಿ ಲಭಿಸಿದೆ. ಆಯಾ ವಿದ್ಯುತ್ ಸರಬರಾಜು ಕಂಪನಿಗಳ ವಿದ್ಯುತ್ ದರ ಇಳಿಕೆಯು ಕೂಡ ಏರುಪೇರಾಗಿದೆ.

Ad Widget . Ad Widget .

ಎಲ್ಲೆಲ್ಲಿ ಎಷ್ಟು ಕಡಿಮೆ ?
ಪ್ರತಿ ಯೂನಿಟ್‌ಗೆ ಬೆಸ್ಕಾಂ 37 ಪೈಸೆ, ಜೆಸ್ಕಾಂ- 51, ಚೆಸ್ಕಾಂ- 39 , ಮೆಸ್ಕಾಂ – 31 ಹಾಗೂ ಹೆಸ್ಕಾಂ ಕೇವಲ ಮೂರು ಪೈಸೆ ತಗ್ಗಿದೆ. ಎಸ್ಕಾಂಗಳು ಸಲ್ಲಿಸಿದ ಈ ಪ್ರಸ್ತಾವನೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ಅನುಮೋದಿಸಿದ್ದು, ಆಯಾ ಕಂಪನಿಗಳು ಆದೇಶ ಹೊರಡಿಸಿವೆ.

ನವೆಂಬರ್‌ನಲ್ಲಿ ಈ ವೆಚ್ಚಗಳಲ್ಲಿ ಏರಿಳಿತವಾಗಿದೆ. ಉತ್ತರಪ್ರದೇಶದಿಂದ ವಿದ್ಯುತ್ ಖರೀದಿ ಒಪ್ಪಂದ, ಕಲ್ಲಿದ್ದಲು ಖರೀದಿ ಖರ್ಚು ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಥವಾ ವೆಚ್ಚ ಇನ್ನೂ ಕಡಿಮೆಯಾದರೆ ವಿದ್ಯುತ್ ದರವೂ ಕಡಿತವಾಗಲಿದೆ.

ನವೆಂಬರ್‌ನ ಲಾಭ ಜನವರಿ ಬಿಲ್‌ಗೆ
ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಇಳಿದಿದ್ದರ ಲಾಭವನ್ನು ಎಲ್ಲ ಶ್ರೇಣಿಯ ಗ್ರಾಹಕರಿಗೆ ಕಾಯ್ದೆ ಪ್ರಕಾರ ವರ್ಗಾಯಿಸಲು ಸಲ್ಲಿಸಿದ್ದ ಪ್ರಸ್ತಾವನೆಗೆ ಕೆಇಆರ್‌ಸಿ ಅಸ್ತು ಎಂದಿದೆ. ನವೆಂಬರ್‌ನಲ್ಲಿ ತಗ್ಗಿದ ವೆಚ್ಚದ ಲಾಭವು ಗ್ರಾಹಕರಿಗೆ ಜನವರಿ ತಿಂಗಳ ಬಿಲ್‌ನಲ್ಲಿ ಲಭಿಸುತ್ತದೆ.

ವಿದ್ಯುತ್ ಬೇಡಿಕೆ ಹಾಗೂ ಬಳಕೆಯನ್ನು ಕಲ್ಲಿದ್ದಲು ಬೇಡಿಕೆ, ಬಳಕೆ ಹಾಗೂ ವಿದ್ಯುತ್ ಖರೀದಿ ಆಧರಿಸಿರುತ್ತದೆ. ಕಲ್ಲಿದ್ದಲು ಮತ್ತು ವಿದ್ಯುತ್ ಖರೀದಿಗೆ ತಗುಲುವ ವೆಚ್ಚವನ್ನು ಹೊಂದಾಣಿಕೆ ಶುಲ್ಕ ರೂಪದಲ್ಲಿ ಭರಿಸಲಾಗುತ್ತದೆ.

ಹೊಂದಾಣಿಕೆ ವೆಚ್ಚದ ಶುಲ್ಕವು ಒಟ್ಟಾರೆ ಮಾರುಕಟ್ಟೆಯನ್ನು ಅವಲಂಬಿಸಿದೆ. ಜನವರಿಯಲ್ಲಿ ಬಿಲ್ ಕಡಿಮೆಯಾದರೆ, ಮುಂದಿನ ತಿಂಗಳ ಬಿಲ್ ಮೊತ್ತ ಮತ್ತಷ್ಟು ಕಡಿಮೆಯಾಗಬಹುದು ಅಥವಾ ಏರಿಕೆಯಾಗಲೂಬಹುದು ಎಂದು ಎಸ್ಕಾಂ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *