ಸಮಗ್ರ ನ್ಯೂಸ್: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಕ್ಷೇತ್ರ ಬೆಳಗಾವಿ ಜಿಲ್ಲೆ ಒಂದಲ್ಲಾ ಒಂದು ಕೇಸ್ ನಲ್ಲಿ ಮುಂದಿದ್ದು, ಈ ಜಿಲ್ಲೆಯಲ್ಲಿ ಇಂತ ಪರಿಸ್ಥಿತಿಗೆ ಕಾರಣವೇನು ಅಂತಾನೆ ತಿಳಿಯದಂತಾಗಿದೆ. ಬೆಳಗಾವಿಯ ವಂಟಮೂರಿ ಗ್ರಾಮದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿಯ ಬಸುರ್ತೆ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ 50 ವರ್ಷದ ಅಂಗನವಾಡಿ ಸಹಾಯಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಸದ್ಯ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದೇ ಗ್ರಾಮದ ಕಲ್ಯಾಣಿ ಮೋರೆ ಮಹಿಳೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದವರು.
ಅಂಗನವಾಡಿ ಮಕ್ಕಳು ಪಕ್ಕದ ಮನೆಯಲ್ಲಿ ಹೂವು ಕಿತ್ತಿದ್ದಾರೆ ಎಂಬ ಕಾರಣಕ್ಕೆ ಸಹಾಯಕಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಅಂಗನವಾಡಿ ಸಹಾಯಕಿಗೆ ಥಳಿಸಿ ಕುಡಗೋಲಿನಿಂದ ಹೊಡೆದಿದ್ದಾರೆ. ಮೂಗು ಕಟ್ ಆಗಿ ಶ್ವಾಸಕೋಶದಲ್ಲಿ ರಕ್ತ ಹೋಗಿ ಸಾವು ಬದುಕಿನ ಮಧ್ಯೆ ಅಂಗನವಾಡಿ ಸಹಾಯಕಿ ಹೋರಾಡುತ್ತಿದ್ದಾರೆ.
ಈ ಘಟನೆ ಸಂಬಂಧ ಅಂಗನವಾಡಿ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂದಾ ನೇವಗಿ ಪ್ರತಿಕ್ರಿಯೆ ನೀಡಿದ್ದು, ಅಂಗನವಾಡಿ ಮಕ್ಕಳನ್ನ ಶೌಚಾಲಯಕ್ಕೆ ಸುಗಂಧಾ ಕರೆದುಕೊಂಡು ಹೋಗಿದ್ದಾರೆ. ಆಗ ಮಕ್ಕಳು ಹೂ ಕೀಳುವುದನ್ನ ಕಂಡ ಕಲ್ಯಾಣಿ ಎಂಬಾತ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಮಹಿಳೆ ಐಸಿಯುವಿನಲ್ಲಿದ್ದಾರೆ. ಈ ರೀತಿ ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ ಆದ್ರೆ ಹೇಗೆ ಕೆಲಸ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ತವರು ಜಿಲ್ಲೆಯಲ್ಲಿ ಈ ರೀತಿ ಆಗಿದೆ. ಕೂಡಲೇ ಹಲ್ಲೆ ಮಾಡಿದವನ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವರೆಗೂ ಆರೋಪಿಯ ಬಂಧನ ಆಗಿಲ್ಲ. ಮಹಿಳೆಯರನ್ನ ಅಕ್ಕಾ ಅಂತಾ ಹೇಳುವ ಸಚಿವೆ ಈ ವರೆಗೂ ಆಸ್ಪತ್ರೆಗೆ ಬಂದಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಿ ಸಚಿವರು ಹೇಳಿದಂತೆ ನಡೆದುಕೊಳ್ಳಲಿ ಎಂದರು.