ಸಮಗ್ರ ನ್ಯೂಸ್: ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಜ.1 ರ ಸಂಜೆ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ನಾಲ್ಕು ಮಂದಿ ಹಿಂಸೆಗೆ ಬಲಿಯಾಗಿದ್ದಾರೆ. ಇತರ ಐದು ಮಂದಿಗೆ ಗಂಭೀರ ಸ್ವರೂಪದ ಗುಂಡೇಟು ತಗುಲಿದೆ. ಕಳೆದ ವರ್ಷದ ಮೇ ತಿಂಗಳಿನಿಂದೀಚೆಗೆ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿರುವ ರಾಜ್ಯದಲ್ಲಿ ಕರ್ಪ್ಯೂ ಬಿಗಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ತೌಬಲ್ನ ಲಿಲಾಂಗ್ ಪ್ರದೇಶದಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಇನ್ನೂ ಘಟನಾ ಸ್ಥಳವನ್ನು ಪೊಲೀಸರು ತಲುಪಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಲಿಗಾಂಗ್ ಜನತೆ ಕೂಡಾ ಘಟನೆಯನ್ನು ದೃಢಪಡಿಸಿದ್ದು, ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
“ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಕೆಲ ದಾಳಿಕೋರರನ್ನು ಸ್ಥಳೀಯರು ಹಿಡಿದಿದ್ದಾರೆ ಎನ್ನಲಾಗಿದ್ದು, ಇದು ದೃಢಪಟ್ಟಿಲ್ಲ. ಪ್ರತಿಭಟನಾಕಾರರು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದರಿಂದ ಪೊಲೀಸರು ಇನ್ನೂ ಗ್ರಾಮವನ್ನು ತಲುಪಲು ಸಾಧ್ಯವಾಗಿಲ್ಲ” ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಲಿಗಾಂಗ್ ಪ್ರದೇಶ ರಾಜ್ಯ ರಾಜಧಾನಿ ಇಂಫಾಲದಿಂದ 12 ಕಿಲೋಮೀಟರ್ ದೂರದಲ್ಲಿದೆ. ಈ ಹತ್ಯೆಯ ಬೆನ್ನಲ್ಲೇ ರಾಜ್ಯ ಸರ್ಕಾರ ರಾತ್ರಿ ಕರ್ಪ್ಯೂವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.