ಸಮಗ್ರ ನ್ಯೂಸ್: ಬಿಜೆಪಿಯಿಂದ ನನ್ನನ್ನು ಉಚ್ಚಾಟಿಸಿದರೆ ಕೊರೊನಾ ಸಾಂಕ್ರಾಮಿಕದ ವೇಳೆ ನಡೆದಿರುವ 40 ಸಾವಿರ ಕೋಟಿ ರೂ. ಅವ್ಯವಹಾರದ ದಾಖಲೆಯನ್ನು ಬಿಡುಗಡೆ ಮಾಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸ್ಫೋಟಕ ಹೇಳಿಕೆ ನೀಡಿರುವ ಯತ್ನಾಳ್, ಸ್ವಪಕ್ಷೀಯರ ವಿರುದ್ಧ ಮತ್ತೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಬಿಜೆಪಿಯ ಫೈರ್ ಬ್ರಾಂಡ್ ಆಗಿ ಗುರುತಿಸಿಕೊಂಡಿರುವ ಅವರು, ‘ನಾನು ಸತ್ಯ ಹೇಳಿದರೆ ಎಲ್ಲರಿಗೂ ಭಯವಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ’ ಅಂತಾ ಗಂಭೀರ ಆರೋಪ ಮಾಡಿದ್ದಾರೆ.
‘ನಾನು ಪ್ರಧಾನಿ ಮೋದಿಯವರಿಗಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನನಗೆ ನೋಟಿಸ್ ಕೊಟ್ಟು ಪಕ್ಷದಿಂದ ಉಚ್ಚಾಟಿಸಿ ನೋಡಲಿ. ಆಗ ಇವರೆಲ್ಲರ ಬಣ್ಣ ಬಯಲು ಮಾಡುತ್ತೇನೆ’ ಎಂದು ಪರೋಕ್ಷವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
’45 ರೂ. ಮಾಸ್ಕ್ ಗೆ 485 ರೂ. ಬಿಲ್ ಹಾಕಿದ್ದಾರೆ. ಬೆಡ್‌ಗಳಿಗೆ 1 ದಿನಕ್ಕೆ 10 ಸಾವಿರ ರೂ. ಬಾಡಿಗೆ ನೀಡಿದ್ದಾರೆ. ಖರೀದಿ ಮಾಡಿದರೆ 1 ದಿನದ ಬಿಲ್‍ನಲ್ಲಿ 2 ಬೆಡ್ ಬರುತ್ತಿದ್ದವು. ಕೊರೊನಾ ಸಂಕಷ್ಟದ ಸಮಯದಲ್ಲಿ ಮಾಸ್ಕ್ ಮತ್ತು ಬೆಡ್‌ಗಳಲ್ಲೂ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ’ ಅಂತಾ ಯತ್ನಾಳ್ ಹೇಳಿದ್ದಾರೆ.
‘ನಮ್ಮ ಸರ್ಕಾರ ಇದ್ದರೆ ಏನು ಆಯ್ತು? ಕಳ್ಳರು ಕಳ್ಳರೇ ಅಲ್ವಾ? ನನಗೆ ಆಸ್ಪತ್ರೆಯಲ್ಲಿ 5 ಲಕ್ಷ ರೂ. ಬಿಲ್ ಹಾಕಿದರು. ಇನ್ನು ಬಡವರು ಏನು ಮಾಡಬೇಕು. ಕೊರೊನಾ ಸಾಂಕ್ರಾಮಿಕದ ವೇಳೆ ಕೋಟಿ ಕೋಟಿ ಲೂಟಿ ಆಗಿದೆ’ ಅಂತಾ ಯತ್ನಾಳ್ ಕಿಡಿಕಾರಿದ್ದಾರೆ.
ಜನವರಿ 5ಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿದೆ. ಇದರ ನಂತರ ಅಪ್ಪಾಜಿಯದ್ದೇ ಹೊರ ತೆಗೆಯುತ್ತೇನೆ ಅಂತಾ ಹೇಳುವ ಮೂಲಕ ಯಡಿಯೂರಪ್ಪ ವಿರುದ್ಧ ತನಿಖೆಗೆ ಒತ್ತಾಯಿಸುವುದಾಗಿ ಯತ್ನಾಳ್ ಗುಡುಗಿದ್ದಾರೆ.