ಸಮಗ್ರ ನ್ಯೂಸ್: ಸಿಲ್ಕ್ ಫ್ಯಾಕ್ಟರಿ ಮಾಲೀಕನೊಬ್ಬ ಕಾರ್ಮಿಕ ಮುಂಗಡವಾಗಿ ಹಣ ಪಡೆದಿದ್ದಕ್ಕೆ ಆತನ ಕಾಲಿಗೆ ಸರಪಳಿ ಹಾಕಿ ಜೀತಕ್ಕೆ ನೇಮಿಸಿಕೊಂಡ ಅಮಾನವೀಯ ಘಟನೆ ರಾಮನಗರದ (Ramanagara) ಮೆಹಬೂಬ್ ನಗರದಲ್ಲಿ ನಡೆದಿದೆ.
ಕಾಲಿಗೆ ಸರಪಳಿ ಹಾಕಿಸಿಕೊಂಡು ಕಾರ್ಖಾನೆಯಲ್ಲಿ ಜೀತಕ್ಕೆ ಸಿಲುಕಿದ್ದ ಕಾರ್ಮಿಕನನ್ನು ವಸೀಂ (24) ಎಂದು ಗುರುತಿಸಲಾಗಿದೆ. ಆತ ಕಾರ್ಖಾನೆಯ ಮಾಲೀಕನ ಬಳಿ 1.50 ಲಕ್ಷ ರೂ. ಮುಂಗಡವಾಗಿ ಸಾಲ ಪಡೆದಿದ್ದ. ಇದಾದ ಬಳಿಕ ಅನಿವಾರ್ಯ ಕಾರಣದಿಂದ ಒಂದು ತಿಂಗಳು ಕೆಲಸಕ್ಕೆ ಹೋಗಿರಲಿಲ್ಲ. ಇದೇ ಕಾರಣಕ್ಕೆ ಮಾಲೀಕ ಆತನನ್ನು ಬಂಧಿಸಿ ಜೀತಕ್ಕೆ ನೇಮಿಸಿಕೊಂಡಿದ್ದಾನೆ.
ಕಾರ್ಮಿಕನ ಕಾಲಿಗೆ 9 ದಿನಗಳಿಂದ ಸರಪಳಿ ಹಾಕಿ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಈ ವಿಚಾರ ತಿಳಿದ ರಾಮನಗರ ಟೌನ್ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ರಕ್ಷಿಸಿದ್ದಾರೆ. ವಸೀಂ ಐದು ತಿಂಗಳ ಹಿಂದೆ ಕಾರ್ಖಾನೆಗೆ ಕೆಲಸಕ್ಕೆ ಸೇರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಮಾಲೀಕ ಸಯ್ಯದ್ ಇಸಾಮ್ ಮತ್ತು ಮೇಲ್ವಿಚಾರಕ ಸಯ್ಯದ್ ಅಮ್ಜದ್ ವಿರುದ್ಧ ಪ್ರಕರಣ ದಾಖಲಾಗಿದೆ.