ಸಮಗ್ರ ನ್ಯೂಸ್: ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಕೊಡಗು ಜಿಲ್ಲೆಗೆ ಕಳೆದ ಬಾರಿಗಿಂತ ಅತ್ಯಧಿಕ ಪ್ರವಾಸಿಗರು ಆಗಮಿಸಿದ್ದಾರೆ. ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಈ ಸಂಜೆ ಪ್ರವಾಸಿ ತಾಣವಾದ ರಾಜ ಸೀಟಿನಲ್ಲಿ ಅಸಂಖ್ಯ ಪ್ರವಾಸಿಗರು ನೆರೆದು ಪ್ರಕೃತಿ ಸೌಂದರ್ಯವನ್ನು ಸವಿದರು.
ಮಡಿಕೇರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಪೊಲೀಸರು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಾಡ್ಜು ಹೋಂ ಸ್ಟೇ ರೆಸಾರ್ಟ್ ಗಳೆಲ್ಲ ಭರ್ತಿಯಾಗಿ ಕೆಲವು ಪ್ರವಾಸಿಗರಂತು ವಾಹನ ದಟ್ಟಣೆಯನ್ನು ನೋಡಿ ಯಾಕಪ್ಪ ಈ ಸಮಯದಲ್ಲಿ ನಾವು ಬಂದಿದ್ದೇವೆ ಅನಿಸಿದಂತೂ ಸತ್ಯ. ಜಿಲ್ಲೆಯ ಮಡಿಕೇರಿ ಗೋಣಿಕೊಪ್ಪ ಭಾಗಮಂಡಲ, ವಿರಾಜಪೇಟೆ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಸರದಿ ಸಾಲಿನಲ್ಲಿ ವಾಹನವನ್ನು ಚಲಾಯಿಸುವ ಪರಿಸ್ಥಿತಿ ಎದುರಾಗಿದೆ. ಕ್ರಿಸ್ಮಸ್ ರಾಜವಾದರಿಂದ ಜಿಲ್ಲೆಯ ಬಹುತೇಕ ಮದುವೆ ಮಂಟಪಗಳಲ್ಲಿ ಶುಭ ಸಮಾರಂಭ ನಡೆಯುತ್ತಿದೆ. ಇದರಿಂದ ವಾಹನ ದಟ್ಟಣೆಯು ಕೂಡ ಹೆಚ್ಚಾಗಿದೆ. ಕೊಡಗಿನ ರಸ್ತೆಗಳಲ್ಲಿ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಲೈನ್ ಬಸ್ಗಳಂತೂ ಸರದಿ ಸಾಲಿನಿಂದ ಮುಂದೆ ಸಾಗಲು ಸಾಧ್ಯವಿಲ್ಲದೆ ಸಮಯ ಪಾಲನೆಯಲ್ಲಿ ಕೂಡ ವ್ಯತ್ಯಾಸವಾಗಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಕೊಡಗಿನಲ್ಲಿ ಪ್ರವಾಸಿಗರಿಗೆ ತಂಗಲು ಎಲ್ಲೂ ಕೂಡ ಸ್ಥಳವಕಾಶ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂದು ನಾಳೆ ಬಸ್ ನಿಲ್ದಾಣದಲ್ಲೂ ಕೂಡ ಹಲವರು ಆಶ್ರಯ ಪಡೆಯುವ ಸಾಧ್ಯತೆಗಳು ಹೆಚ್ಚಿವೆ, ಎಲ್ಲಾ ಪ್ರಮುಖ ರಸ್ತೆ ಬದಿಗಳಲ್ಲಿ ವಾಹನಗಳು ನಿಲ್ಲಿಸಿಕೊಂಡು ಅಲ್ಲೇ ತಂಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಕೊಡಗಿನತ್ತ ಪ್ರವಾಸಿಗರ ಚಿತ್ತ ಹೆಚ್ಚಾಗಿದ್ದು ಸ್ಥಳೀಯರಿಗೆ ಕಿರಿಕಿರಿ ಉಂಟಾಗುತ್ತಿರುವುದು ಸಹಜವಾಗಿದೆ.