ಸಮಗ್ರ ನ್ಯೂಸ್: ಲಸಿಕೆ ಎಫೆಕ್ಟ್ ನಿಂದ ಎರಡು ವರ್ಷದ ಮಗು ಸಾವನಪ್ಪಿರೋ ಆರೋಪ ಕೇಳಿ ಬಂದಿದೆ. ಅಂಗನವಾಡಿ ಸಿಬ್ಬಂದಿ ಯಡವಟ್ಟಿನಿಂದ ಎರಡು ವರ್ಷದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಹುಬ್ಬಳ್ಳಿಯ ಉಣಕಲ್ ನಿವಾಸಿ ಜಟ್ಟೆಪ್ಪ ಮತ್ತು ಮಲ್ಲಮ್ಮ ಎಂಬುವವರ ಎರಡು ವರ್ಷದ ಮೊಮ್ಮಗ ಧೃವ ಸಾವನ್ನಪ್ಪಿದ ಮಗುವಾಗಿದೆ. ತಾತ ಹಾಗೂ ಅಜ್ಜಿಯ ಮನೆಯಲ್ಲಿ ವಾಸವಿದ್ದ ಮಗು ದೃವ, ಲಸಿಕೆ ಓವರ್ ಡೋಸ್ ನಿಂದಾಗಿ ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ನಿನ್ನೆ ಮಧ್ಯಾಹ್ನ ಸಾಯಿನಗರದ ಅಂಗನವಾಡಿಯೊಂದರಲ್ಲಿ ಅಜ್ಜಿ ಮಲ್ಲಮ್ಮ ಮಗುವಿಗೆ ಲಸಿಕೆ ಹಾಕಿಸಿದ್ದರಂತೆ. ಲಸಿಕೆ ಹಾಕಿಸಿದ ನಂತರ ಮಗುವಿಗೆ ತೀವ್ರ ಜ್ವರ ಬಂದಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದನಂತೆ.
ಕೂಡಲೇ ಪೋಷಕರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಕಿಮ್ಸ್ ಗೆ ದಾಖಲಾಗುತ್ತಿದ್ದಂತೆಯೇ ಮಗು ಸಾವನ್ನಪ್ಪಿದೆ. ಅಂಗನವಾಡಿ ಕಾರ್ಯಕರ್ತೆಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಮಗುವಿನ ಪೋಷಕರು ಆರೋಪ ಮಾಡಿದ್ದು, ಕಿಮ್ಸ್ ಆವರಣದಲ್ಲಿ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.