ಸಮಗ್ರ ನ್ಯೂಸ್: ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಹಾಗೂ ಶಾಸಕ ಎಚ್.ಡಿ ರೇವಣ್ಣ ಅವರನ್ನೊಳಗೊಂಡ ಜೆಡಿಎಸ್ ನಿಯೋಗವು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸತ್ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿತು.
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಜೆಡಿಎಸ್ ನಿಯೋಗವು ಪ್ರಧಾನಿ ಮೋದಿಯನ್ನು ಭೇಟಿಯಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಸಹ ಜೆಡಿಎಸ್ ನಿಯೋಗದಲ್ಲಿದ್ದರು. ಜೆಡಿಎಸ್ ನಾಯಕರನ್ನು ಭೇಟಿಯಾದ ಬಗ್ಗೆ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ಭೇಟಿಯಾಗುವುದು ಯಾವಾಗಲೂ ಸಂತಸದ ವಿಚಾರ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ, ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ರೇವಣ್ಣ ಅವರೂ ಇದ್ದರು. ದೇಶದ ಪ್ರಗತಿಗೆ ದೇವೇಗೌಡರ ಅನುಸರಣೀಯ ಕೊಡುಗೆಯನ್ನು ಭಾರತವು ಬಹುವಾಗಿ ಗೌರವಿಸುತ್ತದೆ. ವೈವಿಧ್ಯಮಯ ನೀತಿ ವಿಷಯಗಳ ಕುರಿತು ಅವರ ಆಲೋಚನೆಗಳು ಒಳನೋಟವುಳ್ಳವು ಮತ್ತು ಭವಿಷ್ಯದ ದೃಷ್ಟಿಕೋನ ಹೊಂದಿದವುಗಳಾಗಿವೆ’ ಎಂದು ಮೋದಿ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ದೇಶದ ಪ್ರಧಾನಿಯವರನ್ನು ನಾನು ದೇವೇಗೌಡರು, ರೇವಣ್ಣ ಇತರ ಶಾಸಕರು ಭೇಟಿಯಾಗಿದ್ದೇವೆ. ನಾನು ಮತ್ತು ದೇವೇಗೌಡರು ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಸೀಟು ಹಂಚಿಕೆ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಮೋದಿ ಭೇಟಿ ಬಳಿಕ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಿಶೇಷವಾಗಿ ದೇವೇಗೌಡರ ಬಗ್ಗೆ ಮೋದಿಯವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಗೌರವ ಕೊಡುವುದನ್ನು ಅನೇಕ ಬಾರಿ ಕಂಡಿದ್ದೇನೆ. ನಮ್ಮ ಕುಟುಂಬದ ಬಗ್ಗೆ ಪ್ರಧಾನಿ ವಿಶ್ವಾಸ ಇಟ್ಟಿದ್ದಾರೆ. ಅದರಲ್ಲಿ ಕುಂದುಂಟಾಗಿಲ್ಲ. ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಹಾಗೇ ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಮೀಸಲಾತಿಗಾಗಿ ಮನವಿ ಮಾಡಿದ್ದೇವೆ. ರಾಜ್ಯದ ನೀರಾವರಿ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ರಾಜ್ಯದ ನೀರಾವರಿ ಯೋಜನೆ ಬಗ್ಗೆ ಪ್ರಧಾನಿಯವರ ಗಮನ ಸೆಳೆದಿದ್ದೇವೆ. ಕೊಬ್ಬರಿ ಬೆಂಬಲಬೆಲೆ ಹೆಚ್ಚಿಸುವಂತೆ ಮನವಿ ಮಾಡಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.