ಸಮಗ್ರ ನ್ಯೂಸ್: ಪುತ್ತೂರು ಸುಳ್ಯ ಕೇರಳ ಗಡಿಭಾಗ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವು ಪೆರ್ನಾಜೆಯಲ್ಲಿನ ಕುಮಾರ್ ಪೆರ್ನಾಜೆ ಮತ್ತು ರಾಘವೇಂದ್ರ ಭಟ್ ಅವರ ತೋಟಗಳಿಗೆ ಹಾನಿ ಮಾಡಿದ ಘಟನೆ ಡಿ. 20 ರಂದು ಮುಂಜಾನೆ ನಡೆದಿದೆ.
ಕುಮಾರ್ ರವರ ಒಂದು ತೆಂಗಿನ ಮರ, ಎರಡು ಅಡಿಕೆ ಮರ ,ಮೂರು ಬಾಳೆ ದೀವಿ, ಹಲಸು ಮರದ ಸಿಪ್ಪೆಗಳನ್ನೆಬ್ಬಿಸಿ ತಿಂದು ಹಲವು ಬೈನೇ ಮರಗಳನ್ನು ನಾಶ ಮಾಡಿ ಕೆರೆಯಲ್ಲಿ ಈಜಾಡಿದೆ. ಇನ್ನು ಸಮೀಪದ ರಾಘವೇಂದ್ರ ಭಟ್ರ ತೋಟದಲ್ಲೂ ಸಹ ಮೂರು ಬಾಳೆ ಗಿಡಗಳನ್ನು ನಾಶ ಮಾಡಿದೆ.
ಈಗಾಗಲೇ ಮಂಡೆಕೋಲು, ಮೂರೂರು, ಬೆಳ್ಳಿಪ್ಪಾಡಿ, ಹಾಗೂ ಪಂಜಿಕಲ್ಲು ಪರಿಸರದ ಕೃಷಿಕರ ತೋಟಗಳಿಗೆ ದಾಳಿ ನಡೆಸಿದೆ. ಈ ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದು ನೂಜಿಬೈಲು ತನಕ ಹಾನಿಗೊಳಿಸಿದೆ. ಈ ಭಾಗಗಳಲ್ಲಿ ಕೃಷಿಕರು ಹೆಚ್ಚಿರುವುದರಿಂದ ಅರಣ್ಯ ಇಲಾಖೆಯವರು ಈ ಬಗ್ಗೆ ಕ್ರಮ ವಹಿಸಬೇಕಾಗಿದೆ ಎಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.