ಸಮಗ್ರ ನ್ಯೂಸ್: ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಗ್ಯಾಸ್ ಏಜೆನ್ಸಿ ನೀಡಿದ ಕಾರ್ಡ್, ಈ ಮೂರನ್ನು ಡಿ. 31ರೊಳಗೆ ಆಯಾ ಗ್ಯಾಸ್ ಏಜೆನ್ಸಿಯ ಕಚೇರಿಗೆ ತೆಗೆದುಕೊಂಡು ಹೋಗಿ ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕು. ಕೆವೈಸಿ ಮಾಡಿಸಿದರೆ ಜನವರಿ 1ರಿಂದ ಪ್ರತೀ ಅನಿಲ ಗ್ರಾಹಕರಿಗೆ 500 ರೂ. ಸಬ್ಸಿಡಿ ಸಿಗುತ್ತದೆ. ಇಲ್ಲದಿದ್ದರೆ ‘ಅಡುಗೆ ಅನಿಲ’ವು 2024ರ ಜನವರಿ 1ರ ಬಳಿಕ ‘ವಾಣಿಜ್ಯ ಅನಿಲ’ವಾಗಿ ಮಾರ್ಪಾಡು ಹೊಂದಲಿದೆ. ಇದರಿಂದ ನಿಮಗೆ ನಷ್ಟವಾಗಲಿದೆ. ಹಾಗಾಗಿ ತಕ್ಷಣ ‘ಗ್ಯಾಸ್ ಏಜೆನ್ಸಿದಾರರ ಕಚೇರಿಗೆ ತೆರಳಿ ಕೆವೈಸಿ ಮಾಡಿಸಿರಿ’ ಎಂಬ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ವೈರಲ್ ಆಗ್ತಿದೆ.
ಈ ಸಂದೇಶದ ಸತ್ಯಾಂಶ ಅರಿಯದ ಗ್ರಾಹಕರು ಗ್ಯಾಸ್ ಏಜೆನ್ಸಿಯ ಕಚೇರಿಗೆ ಅಲೆದಾಡುತ್ತಿದ್ದಾರೆ. ಕೆಲವರು ಕೆಲಸಕ್ಕೆ ರಜೆ ಹಾಕಿ ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಗ್ರಾಹಕರು ತಮ್ಮ ಬಳಿಗೆ ಯಾಕೆ ಬರುತ್ತಿದ್ದಾರೆ ಎಂಬ ಮಾಹಿತಿಯೂ ಬಹುತೇಕ ಏಜೆನ್ಸಿಗಳಿಗೂ ಇಲ್ಲ, ಕಚೇರಿಯ ಸಿಬ್ಬಂದಿಗಳಿಗೂ ಇಲ್ಲ. ಯಾರೋ ಹರಿಯಬಿಟ್ಟ ಸಂದೇಶವನ್ನು ನಂಬಿಕೊಂಡು ಏಜೆನ್ಸಿಯ ಕಚೇರಿಗೆ ತಡಕಾಡುವುದು ಇದೀಗ ಎಲ್ಲರಿಗೂ ಸಮಸ್ಯೆಯಾಗಿ ಪರಿಣಮಿಸಿದೆ.
ಇನ್ನೂ ಮುಂದುವರಿದು ಆಹಾರ ಮತ್ತು ನಾಗರಿಕ ಇಲಾಖೆಯ ಕಚೇರಿಗೂ ಕೆಲವರು ದೂರವಾಣಿ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಇಲಾಖೆಯ ಅಧಿಕಾರಿ/ಸಿಬ್ಬಂದಿ ವರ್ಗಕ್ಕೆ ಸ್ಪಷ್ಟನೆ ನೀಡಿ ಗೊಂದಲ ನಿವಾರಿಸುವುದು ಅನಿವಾರ್ಯವಾಗಿದೆ. ಒಟ್ಟಿನಲ್ಲಿ ಈ ಸಂದೇಶದ ಮೂಲಕ ಗ್ರಾಹಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಇನ್ನು ಈ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದವರು ಯಾರು? ಎಂಬುದು ಯಕ್ಷಪ್ರಶ್ನೆಯಾಗಿದೆ.
ಈ ಸಂದೇಶವನ್ನು ಗಮನಿಸಿದ ಬಹುತೇಕ ಗ್ರಾಹಕರು ಕೆಲಸಗಳಿಗೆ ರಜೆ ಹಾಕಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಗ್ಯಾಸ್ ಏಜೆನ್ಸಿ ನೀಡಿದ ಕಾರ್ಡ್‌ಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಲ್ಲುವುದು, ಕೆಲವರು ಕಾದು ಕಾದು ನಿರಾಶೆಯಿಂದ ಮರಳುವುದು ಕೂಡ ಸಾಮಾನ್ಯವಾಗಿದೆ.
ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ ಈವರೆಗೆ ಕೇಂದ್ರ ಸರಕಾರ ಅಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಭವಿಷ್ಯದ ದಿನಗಳಲ್ಲಿ ಇಂತಹ ನಿಯಮ ಜಾರಿಗೆ ಬಂದರೂ ಅಚ್ಚರಿ ಇಲ್ಲ. ಗ್ರಾಹಕರಲ್ಲಿ ಗೊಂದಲ ಸೃಷ್ಟಿಸಲು ಯಾರೋ ಮಾಡಿದ ಕುತಂತ್ರ ಇದಾಗಿದೆ. ಕೇಂದ್ರ ಸರಕಾರವು ಅಧಿಕೃತವಾಗಿ ಆದೇಶ ಹೊರಡಿಸುವವರೆಗೂ ಗ್ರಾಹಕರು ಗ್ಯಾಸ್ ಏಜೆನ್ಸಿಯ ಕಚೇರಿಗೆ ಅಲೆದಾಡಬೇಕಾಗಿಲ್ಲ. ಯಾವುದೇ ಗೊಂದಲಕ್ಕೆ ಒಳಗಾಗಬೇಕಿಲ್ಲ. ಯಾರ ಆಮಿಷಕ್ಕೂ ಮರುಳಾಗಬೇಕಿಲ್ಲ. ಕೆವೈಸಿ ಮಾಡಿಸಿದರೆ 500 ರೂ. ಸಬ್ಸಿಡಿ ಸಿಗುತ್ತದೆ ಎಂಬುದು ಸುಳ್ಳು ಸಂದೇಶವಾಗಿದೆ ಎಂದು ತಿಳಿಸಿದ್ದಾರೆ.
“ಅಡುಗೆ ಅನಿಲ ಪಡೆಯಲು ಕೆವೈಸಿ ಕಡ್ಡಾಯ ಎಂಬ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಇಲಾಖೆಗೆ ಬಂದಿದೆ. ಈ ಸಂದೇಶದಲ್ಲಿ ಯಾವುದೇ ಹುರುಳಿಲ್ಲ. ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರ ಆಧಾರ್ ದೃಢೀಕರಣವು ಕಡ್ಡಾಯವಾಗಿದೆ. ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಬಗ್ಗೆ ಕೇಂದ್ರ ಸರಕಾರವು ಯಾವುದೇ ಘೋಷಣೆ ಈವರೆಗೆ ಮಾಡಿಲ್ಲ. ಹಾಗಾಗಿ ಯಾವ ಕಾರಣಕ್ಕೂ ಗ್ಯಾಸ್ ಬಳಕೆದಾರರು ಯಾವುದೇ ಗೊಂದಲಕ್ಕೊಳಕ್ಕೆ ಒಳಗಾಗಬಾರದು” ಎಂದು ಮಂಗಳೂರಿನ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕಿ ಹೇಮಲತಾ ತಿಳಿಸಿದ್ದಾರೆ.