Ad Widget .

ಸ್ಕ್ಯಾನಿಂಗ್ ಕೇಂದ್ರ ನಿಗಾ ವಹಿಸಿ| ಭ್ರೂಣಹತ್ಯೆ ಗಂಭೀರವಾಗಿ ಪರಿಗಣಿಸಿ: ದಿನೇಶ್ ಗುಂಡೂರಾವ್ ಸೂಚನೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ 29 ಸ್ಕ್ಯಾನಿಂಗ್ ಕೇಂದ್ರಗಳಿದ್ದು, ಸ್ಕ್ಯಾನಿಂಗ್ ಕೇಂದ್ರಗಳಿಗೆ ಆಗಾಗ ಭೇಟಿ ನೀಡಿ ತಪಾಸಣೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Ad Widget . Ad Widget .

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಗಳ ಪ್ರಗತಿ ಹಾಗೂ ಅನುಷ್ಠಾನ ಸಂಬಂಧ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಡಿ. 18ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

Ad Widget . Ad Widget .

ಕೆಲವು ಜಿಲ್ಲೆಯಲ್ಲಿ ಭ್ರೂಣಹತ್ಯೆ ಮಾಡುವುದು ಕೇಳಿಬರುತ್ತಿದ್ದು, ಭ್ರೂಣಹತ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವರು ತಾಕೀತು ಮಾಡಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ 21 ವರ್ಷದಲ್ಲಿ ಸ್ಕ್ಯಾನಿಂಗ್ ಕೇಂದ್ರಗಳ ಸಂಬಂಧ ಒಂದು ಪ್ರಕರಣವು ದಾಖಲಾಗಿಲ್ಲ. ಆ ನಿಟ್ಟಿನಲ್ಲಿ ಎಲ್ಲವೂ ಸರಿಯಿದೆಯೇ ಎಂಬುದನ್ನು ಆತ್ಮವಿಮರ್ಶೆ ಮಾಡಬೇಕಿದೆ ಎಂದು ಸಚಿವರು ಹೇಳಿದರು.

ಈ ಕುರಿತು ಧ್ವನಿಗೂಡಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸ್ಕ್ಯಾನಿಂಗ್ ಕೇಂದ್ರಗಳು ಹಾಗೂ ವೈದ್ಯಾಧಿಕಾರಿಗಳ ನಡುವೆ ಏನಾದರೂ ಸಂಬಂಧ ಇದೆಯೇ ಎಂಬ ಬಗ್ಗೆ ಸಂಶಯ ಉಂಟಾಗುತ್ತಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳು ಸ್ಪ್ರಿಂಗ್ ಆಫರೇಶನ್ ಮೂಲಕ ಸ್ಕ್ಯಾನಿಂಗ್ ಕೇಂದ್ರಗಳ ಚಟುವಟಿಕೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಜೊತೆಗೆ ಸಾರ್ವಜನಿಕರಿಂದಲೂ ಅಭಿಪ್ರಾಯ ಪಡೆಯುವಂತಾಗಬೇಕು. ‘ಲಿಂಗ ಆಯ್ಕೆ ನಿಷೇಧ’ವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ದಿನೇಶ್ ಗುಂಡೂರಾವ್ ಅವರು ನಿರ್ದೇಶನ ನೀಡಿದರು.

ಸ್ಕ್ಯಾನಿಂಗ್ ಕೇಂದ್ರಗಳು ಅಧಿಕೃತವಾಗಿ ನೋಂದಣಿಯಾಗಿರಬೇಕು. ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಗಳು ನಡೆಯಬಾರದು ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಕೊಡಗು ಜಿಲ್ಲೆಯಲ್ಲಿ ಲಿಂಗಾನುಪಾತವು 978 ಇದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು 2011 ರ ಜನಗಣತಿ ಪ್ರಕಾರ 978 ಮಕ್ಕಳ ಲಿಂಗಾನುಪಾತ ಕಾಣಬಹುದಾಗಿದೆ ಎಂದು ವಿವರಿಸಿದರು.

ಕೊಡಗು ಜಿಲ್ಲೆಯ ಬಗ್ಗೆ ವಿಶೇಷ ಆಸಕ್ತಿ ಇದ್ದು, ಅಭಿವೃದ್ಧಿಯ ಕಾರ್ಯಗಳು ನಡೆಯಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಗಳು, ಮಾನವ ಸಂಪನ್ಮೂಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದು, ಹೀಗೆ ಹಲವು ವಿಷಯಗಳ ಮಾಹಿತಿ ಸಂಗ್ರಹಿಸಿ ಬೇಡಿಕೆಗೆ ಸ್ಪಂದಿಸುವುದು ಕರ್ತವ್ಯ ಎಂದು ಸಚಿವರು ಹೇಳಿದರು.

ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯ ಆಧಾರ ಸ್ತಂಭವಾಗಿದ್ದು, ಇವುಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಇಚ್ಛಾಶಕ್ತಿ ಅತ್ಯಗತ್ಯವಾಗಿದ್ದು, ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಸಲಹೆ ಮಾಡಿದರು.

ಪೊನ್ನಂಪೇಟೆ ಮತ್ತು ಕುಶಾಲನಗರದಲ್ಲಿ ತಾಲ್ಲೂಕು ಆಸ್ಪತ್ರೆ ಆಗಬೇಕಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆ ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ವೈದ್ಯರು, ತಜ್ಞ ವೈದ್ಯರ ಸಂಖ್ಯೆ ಕಡಿಮೆ ಇದ್ದು, ಕೊಡಗು ಜಿಲ್ಲೆಯನ್ನು ವಿಶೇಷ ಜಿಲ್ಲೆ ಎಂದು ಪರಿಗಣಿಸಿ ವೈದ್ಯರ ನಿಯೋಜನೆಗೆ ಕ್ರಮವಹಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದರು.

ಕೊಡಗು ಜಿಲ್ಲೆಯಲ್ಲಿ 1336 ಮಂಜೂರಾತಿ ಹುದ್ದೆಯಲ್ಲಿ 838 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 498 ಹುದ್ದೆಗಳು ಖಾಲಿ ಇದ್ದು, ಈ ಸಂಬಂಧ ಕೊಡಗು ಜಿಲ್ಲೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಖಾಲಿ ಹುದ್ದೆ ಭರ್ತಿಗೆ ಕ್ರಮವಹಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯೂ ಸಹ 464 ಮಂಜೂರಾತಿ ಹುದ್ದೆಯಲ್ಲಿ 417 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 47 ಹುದ್ದೆಗಳು ಖಾಲಿ ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಮಾಹಿತಿ ನೀಡಿದರು.

ತಾಯಿ ಮತ್ತು ಶಿಶು ಮರಣ ತಡೆಯುವುದು, ಗರ್ಭಿಣಿಯರು ಮತ್ತು ಶಿಶು ಪಾಲನೆ ಸಂಬಂಧಿಸಿದಂತೆ ವಿಶೇಷ ಕಾಳಜಿ ವಹಿಸುವುದು ಮತ್ತಿತರ ಬಗ್ಗೆ ಗಮನಹರಿಸುವಂತೆ ಸಚಿವರು ಸೂಚಿಸಿದರು.

ಕೊಡಗು ಜಿಲ್ಲೆಯಲ್ಲಿ ಏಪ್ರಿಲ್, 2023 ರಿಂದ ನವೆಂಬರ್ ವರೆಗೆ 4,945 ಗರ್ಭಿಣೀಯರಿದ್ದು, 106 ಮಂದಿ ರಕ್ತಹೀನತೆ, ಶೇ.2 ರಷ್ಟು, ಹಾಗೆಯೇ ರಕ್ತಹೀನತೆ ಸಂಬಂಧಿಸಿದಂತೆ ಚಿಕಿತ್ಸೆಯನ್ನು 140 ಮಂದಿ ಗರ್ಭಿಣೀಯರು ಚಿಕಿತ್ಸೆ ಪಡೆದಿದ್ದಾರೆ ಎಂದು ಡಿಎಚ್‍ಒ ಅವರು ಮಾಹಿತಿ ನೀಡಿದರು.

ಸಂಪೂರ್ಣ ಲಸಿಕೆಯನ್ನು 5745 ಮಕ್ಕಳು ಪಡೆದಿದ್ದು, 9-11 ತಿಂಗಳೊಳಗಿನ ಸಂಪೂರ್ಣ ಲಸಿಕೆ ಪಡೆದ ಮಕ್ಕಳು 5,088 ಆಗಿದೆ ಎಂದು ಅವರು ಡಾ.ಸತೀಶ್ ಕುಮಾರ್ ವಿವರಿಸಿದರು.

ಶಾಲಾ ಮಕ್ಕಳ ಆರೋಗ್ಯ ತಪಾಸಣೆ, ಕೈಗೊಳ್ಳಲಾಗಿದೆ ಎಂದರು. ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳ ಬೌದ್ಧಿಕ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ನೀಡಿದರು. 2023 ಜನವರಿಯಿಂದ ಇಲ್ಲಿಯವರೆಗೆ ಕ್ಷಯರೋಗದಿಂದ 25 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಹಾಗೆಯೇ ಕೊಡಗು ಜಿಲ್ಲೆಯ ಡೆಂಗ್ಯೂ ಪ್ರಕರಣ ನಿಯಂತ್ರಣದಲ್ಲಿದೆ. ಇ-ಸಂಜೀವಿನಿ ಕಾರ್ಯಕ್ರಮ ಅನುಷ್ಠಾನ ಮಾಡುವುದು. ಇ-ಆಸ್ಪತ್ರೆ ಸರಿಪಡಿಸುವುದು, ಆಧಾರ್ ಆಧಾರಿತ ಬಯೋ ಮೆಟ್ರಿಕ್ ಹಾಜರಾತಿ ಜಾರಿಗೊಳಿಸುವುದು, ರಾಷ್ಟ್ರೀಯ ಗುಣಮಟ್ಟ ಸುಧಾರಣೆ ಯೋಜನೆ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಪ್ರಗತಿ, ಇ-ಕಚೇರಿ ನಿರ್ವಹಣೆ, ಮತ್ತಿತರ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಖುಷಿ ಪಡಿಸಲು ಅಂಕಿ ಅಂಶಗಳನ್ನು ನೀಡುವುದು ಬೇಡ. ನಿಖರ ಮಾಹಿತಿಯನ್ನು ನೀಡುವಂತಾಗಬೇಕು ಎಂದು ತಾಕೀತು ಮಾಡಿದರು.

ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ನಿರ್ವಹಿಸಬೇಕು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಇ-ಕಚೇರಿ ಮೂಲಕ ಕಡತಗಳನ್ನು ಸಲ್ಲಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ಗುಣಮಟ್ಟ ಸುಧಾರಣೆ ಯೋಜನೆ, ಆಯುಷ್ಮಾನ್ ಭಾರತ್ ಡಿಜಿಟಲ್ ಅಭಿಯಾನ, ಮತ್ತಿತರ ಬಗ್ಗೆ ಸಚಿವರು ಮಾಹಿತಿ ಪಡೆದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಆದಷ್ಟು ಶೀಘ್ರ ತಜ್ಞ ವೈದ್ಯರನ್ನು ನಿಯೋಜಿಸುವಂತಾಗಬೇಕು ಎಂದು ಸಚಿವರಲ್ಲಿ ಕೋರಿದರು.

ಎಂಆರ್‍ಐ ಸ್ಕ್ಯಾನ್ ಅಳವಡಿಸುವುದು ಸೇರಿದಂತೆ ಅಗತ್ಯ ಮಾನವ ಸಂಪನ್ಮೂಲ ಹಾಗೂ ಉಪಕರಣಗಳನ್ನು ಒದಗಿಸುವಂತಾಗಬೇಕು ಎಂದು ಶಾಸಕರು ಮನವಿ ಮಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ರಂದೀಪ್ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ನವೀನ್ ಭಟ್ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತು ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮ ಅನುಷ್ಠಾನ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

ಕೋವಿಡ್ ಆತಂಕ ಬೇಡ: ಕೋವಿಡ್ ಸಂಬಂಧಿಸಿದಂತೆ ಯಾರೂ ಸಹ ಆತಂಕ ಪಡುವ ಅಗತ್ಯವಿಲ್ಲ. ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣಕನ್ನಡ, ಕೊಡಗು, ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾವಹಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಕೋವಿಡ್ ಪರೀಕ್ಷೆ ಹೆಚ್ಚಿಸಲಾಗುವುದು, ಉಸಿರಾಟದ ತೊಂದರೆ ಹಾಗೂ ಶೀತ, ನೆಗಡಿ, ಜ್ವರ ಮತ್ತಿತರ ಲಕ್ಷಣ ಹೊಂದಿರುವವರಿಗೆ ಪರೀಕ್ಷೆ ಮಾಡಲಾಗುವುದು. ಅನಗತ್ಯ ಆತಂಕ ಬೇಡ ಎಂದು ಸಚಿವರು ಹೇಳಿದರು.

Leave a Comment

Your email address will not be published. Required fields are marked *