ಸಮಗ್ರ ನ್ಯೂಸ್: ಡಾಂಬರ್ ನಲ್ಲಿ ಸಿಲುಕಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ನಾಗರಹಾವೊಂದನ್ನು ಪುತ್ತೂರಿನ ಉರಗಪ್ರೇಮಿ ತೇಜಸ್ ಬನ್ನೂರು ರಕ್ಷಿಸಿ ಹಾವಿಗೆ ಜೀವದಾನ ಮಾಡಿದ್ದಾರೆ.
ಪುತ್ತೂರಿನ ನೆಹರೂನಗರದಲ್ಲಿ ಮನೆಯೊಂದರಲ್ಲಿ ಡಾಂಬರ್ ಡಬ್ಬಿಗಳನ್ನು ಶೇಖರಿಸಿಟ್ಟ ಪ್ರದೇಶದಲ್ಲಿ ನಾಗರಹಾವು ಪತ್ತೆಯಾಗಿತ್ತು. ಸ್ಥಳೀಯರು ನಾಗರಹಾವು ಡಾಂಬರ್ ನಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿ ಉರಗಪ್ರೇಮಿ ತೇಜಸ್ ಬನ್ನೂರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ತೇಜಸ್ ನಾಗರಹಾವಿನ ಚರ್ಮದಿಂದ ಡಾಂಬರ್ ತೆಗೆಯಲು ಎರಡು ದಿನಗಳ ಕಾಲ ಶ್ರಮಪಟ್ಟಿದ್ದಾರೆ. ನಾಗರಹಾವನ್ನು ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಒಂದು ದಿನ ಇಟ್ಟು ಬಳಿಕ ಅದರ ಮೇಲಿಂದ ಡಾಂಬರ್ ಅನ್ನು ಬೇರ್ಪಡಿಸಿದ್ದಾರೆ. ಸುಮಾರು ಒಂದು ವರ್ಷ ಪ್ರಾಯದ ನಾಗರಹಾವು ಚೇತರಿಸಿಕೊಂಡ ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ಕಾರ್ಯವನ್ನೂ ತೇಜಸ್ ಮಾಡಿದ್ದಾರೆ. ಉರಗ ಪ್ರೇಮಿ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.