ಸಮಗ್ರ ನ್ಯೂಸ್: ಸೋದರಳಿಯನೇ ಮಮತಾ ಬ್ಯಾನರ್ಜಿಯ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಅಧಿಕೃತವಾಗಿ ಉತ್ತರ ದೊರೆತಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಕುನಾಲ್ ಘೋಷ್, ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರೇ ಮಮತಾ ನಂತರದಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು 2036 ರವರೆಗೆ ಸೇವೆ ಸಲ್ಲಿಸುತ್ತಾರೆ. ತದನಂತರ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೂಗ್ಲಿ ಜಿಲ್ಲೆಯ ಚುಚುರಾದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಘೋಷ್ ಹೇಳಿದರು. ಮಮತಾ ದೀದಿ ಅವರ ನಾಯಕತ್ವದಲ್ಲಿ ಸ್ಪರ್ಧಿಸುತ್ತೇವೆ ಮತ್ತು ಅಭಿಷೇಕ್ ಬ್ಯಾನರ್ಜಿ ಜನರಲ್ (ದಂಡನಾಯಕ) ಆಗಿರುತ್ತಾರೆ. ಮಮತಾ ಅವರು 2036 ರವರೆಗೆ ಸಿಎಂ ಆಗಿರುತ್ತಾರೆ. ನಂತರ ಅಧಿಕಾರವನ್ನು ಅಭಿಷೇಕ್ ಅವರಿಗೆ ನೀಡಲಾಗುವುದು ಎಂದು ಟಿಎಂಸಿ ವಕ್ತಾರರು ತಿಳಿಸಿದ್ದಾರೆ.
ಎರಡು ಬಾರಿ ಸಂಸದರಾಗಿರುವ ಅಭಿಷೇಕ್ ಬ್ಯಾನರ್ಜಿ ಪ್ರಸ್ತುತ ಟಿಎಂಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.