ಸಮಗ್ರ ನ್ಯೂಸ್: ಸುಬ್ರಹ್ಮಣ್ಯ- ಮಂಜೇಶ್ವರ ಹೆದ್ದಾರಿಯ ಬಳ್ಪ ಸಮೀಪದ ಕಾಡಿನಲ್ಲಿ ಮಂಗಗಳ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವಿಷ ನೀಡಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಬಳ್ಪ–ಕಮಿಲ ರಸ್ತೆಯ ಸಮೀಪ ಕಾಡಿನಲ್ಲಿ ಮೂವತ್ತಕ್ಕೂ ಹೆಚ್ಚು ಮಂಗಗಳ ಶವ ಗುರುವಾರ ಮುಂಜಾನೆ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ಬಳಿಕ ಗುತ್ತಿಗಾರು ಪಶು ವೈದ್ಯಾಧಿಕಾರಿ ಡಾ| ವೆಂಕಟಾಚಲಪತಿ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಮಂಗಗಳಿಗೆ ವಿಷ ನೀಡಿ ಕೊಂದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ನಡುವೆ ಮಂಗನ ಕಾಯಿಲೆಯಿಂದ ಸತ್ತಿರಬಹುದೇ ಎಂಬ ಅನುಮಾನ ಸ್ಥಳಿಯರಲ್ಲಿ ಮೂಡಿದ್ದು, ಇದನ್ನು ಆರೋಗ್ಯ ಇಲಾಖೆ ಮೂಲಗಳು ತಳ್ಳಿಹಾಕಿವೆ. ಈ ಸಂದರ್ಭ ಪಂಜ ವಲಯಾರಣ್ಯಾಧಿಕಾರಿ ಗಿರೀಶ್ ಮತ್ತು ಸಿಬಂದಿ ಉಪಸ್ಥಿತರಿದ್ದರು.
ಮಂಗಗಳ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ ನಡೆಸಿ ದಹನ ಮಾಡಲಾಯಿತು ಎಂದು ಸುಬ್ರಹ್ಮಣ್ಯ ಉಪವಿಭಾಗ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ನ್ಯಾಯಾಲಯದ ಅನುಮತಿ ಮೇರೆಗೆ ಶುಕ್ರವಾರ ಹೆಚ್ಚಿನ ಪರೀಕ್ಷೆಗಾಗಿ ಮಾದರಿಯನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಅರಣ್ಯ ಇಲಾಖೆ ನಡೆಸಲಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.