ಸಮಗ್ರ ನ್ಯೂಸ್: ಸಂಸತ್ತಿನ ಮೇಲೆ ದಾಳಿ ಪ್ರಕರಣದ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಆರು ಜನರು ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭಾಗಿಯಾದವರಲ್ಲಿ ಇಬ್ಬರು ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್. ಸಂಸತ್ತಿನ ಹೊರಗಡೆಯ ಘಟನೆಯಲ್ಲಿ ಭಾಗಿಯಾದವರು ನೀಲಂ ದೇವಿ ಮತ್ತು ಅಮೋಲ್ ಶಿಂಧೆ. ಐದನೆಯ ವ್ಯಕ್ತಿಯನ್ನು ಲಲಿತ್ ಝಾ ಎಂದು ಹೆಸರಿಸಲಾಗಿದ್ದು, ಆತನ ಗುರುಗ್ರಾಮದ ಮನೆಯಲ್ಲಿ ಐವರು ಉಳಿದುಕೊಂಡಿದ್ದರು ಎನ್ನಲಾಗಿದೆ. ಆರನೇ ವ್ಯಕ್ತಿಯ ಹೆಸರು ವಿಕ್ರಂ ಎನ್ನಲಾಗಿದೆ. ಲಲಿತ್ ಝಾ ಜೊತೆ ಆತನೂ ಪರಾರಿಯಾಗಿದ್ದಾನೆ.
ಲೋಕಸಭೆಯೊಳಗೆ ನುಗ್ಗಿದವರಲ್ಲಿ ಇಬ್ಬರ ಪೈಕಿ ಸಾಗರ್ ಶರ್ಮಾ ಉತ್ತರ ಪ್ರದೇಶದ ಲಕ್ನೋ ಮೂಲದವನು ಎನ್ನಲಾಗಿದೆ. ಇನ್ನೋರ್ವ ಕರ್ನಾಟಕದ ಮೈಸೂರಿನ ಡಿ ಮನೋರಂಜನ್ ಎಂಬುದು ಪ್ರಾಥಮಿಕ ವಿಚಾರಣೆಯಿಂದ ದೃಢಪಟ್ಟಿದೆ. ಸಂಸತ್ತಿನ ಹೊರಗೆ ಸಿಕ್ಕಿಬಿದ್ದ ಇಬ್ಬರಲ್ಲಿ ಓರ್ವ ಮಹಾರಾಷ್ಟ್ರದ ಲಾತೂರಿನ ಅಮೋಲ್ ಶಿಂಧೆ ಎನ್ನಲಾಗಿದೆ. ಮತೊಬ್ಬಳು ಹರಿಯಾಣದ ಹಿಸಾರ್ ನ ನೀಲಂ ದೇವಿ ಎಂದು ತಿಳಿದು ಬಂದಿದೆ.
ಸಂಸತ್ತಿನೊಳಗೆ ಅಪರಿಚಿತರು ನುಗ್ಗಿದ ಬಳಿಕ ಹೊಸ ಸಂಸತ್ ಕಟ್ಟಡದಲ್ಲಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳ ಮಹಾಪೂರವೇ ಹರಿದುಬಂದಿದೆ. ಐದು ಹಂತಗಳಲ್ಲಿ ಭದ್ರತಾ ಸ್ಕ್ರೀನಿಂಗ್ ಇದ್ದರೂ, ಭದ್ರತಾ ವೈಫಲ್ಯವಾದುದು ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಪೊಲೀಸರ ಪ್ರಕಾರ, ಎಲ್ಲಾ ಆರು ಮಂದಿ ಆನ್‍ಲೈನ್‍ನಲ್ಲಿ ಭೇಟಿಯಾಗಿ, ಒಟ್ಟಿಗೆ ಈ ಯೋಜನೆ ರೂಪಿಸಿದರು ಎನ್ನಲಾಗಿದೆ. ಅವರು ಯಾವುದೇ ಭಯೋತ್ಪಾದಕ ಗುಂಪಿನಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ ಎಂದು ಮೂಲಗಳು ಎನ್‍ಡಿಟಿವಿಗೆ ತಿಳಿಸಿವೆ.
ಸಂಸತ್ತಿನೊಳಗೆ ನುಗ್ಗಿದ ಘಟನೆಯಲ್ಲಿ ಭಾಗಿಯಾದ, ಲೋಕಸಭೆಯ ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್, ಅವರಿಬ್ಬರೂ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ. ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್ ಅವರ ಆಧಾರ್ ಕಾರ್ಡ್‍ಗಳು ಸೇರಿದಂತೆ ಇನ್ನೂ ಕೆಲವು ವಿವರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಶಿಕ್ಷಕಿಯಾಗಿರುವ 42 ವರ್ಷದ ನೀಲಂ ದೇವಿ, ನಾಗರಿಕ ಸೇವೆ ಪರೀಕ್ಷೆಗಳಿಗೆ ಅಭ್ಯಾಸ ಮಾಡುತ್ತಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.