ಸಮಗ್ರ ನ್ಯೂಸ್: ಡಿಸೆಂಬರ್ 17ರಂದು ನಿಗದಿಯಾಗಿದ್ದ ಐಎನ್‍ಡಿಐಎ ಮೈತ್ರಿಕೂಟದ ನಾಲ್ಕನೇ ಸಭೆಯನ್ನು ಮತ್ತೆ ಮುಂದೂಡಲಾಗಿದ್ದು, ಡಿಸೆಂಬರ್ 19ರಂದು ದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ. ಡಿ. 6ರಂದು ನಡೆಯಬೇಕಿದ್ದ ಈ ಸಭೆಯನ್ನು ಈ ಮೊದಲು ಡಿ. 17ಕ್ಕೆ ಮುಂದೂಡಲಾಗಿತ್ತು.
ಡಿಸೆಂಬರ್ 6 ರಂದು ಮೊದಲು ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸದಿರಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಜಾಖರ್ಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಮೈತ್ರಿಕೂಟದ ಉನ್ನತ ನಾಯಕರು ನಿರ್ಧರಿಸಿದ ನಂತರ ಸಭೆಯನ್ನು ಡಿಸೆಂಬರ್ 17 ಕ್ಕೆ ಮುಂದೂಡಲಾಗಿತ್ತು.
27 ಮೈತ್ರಿ ಪಕ್ಷಗಳ ಈ ಹಿಂದಿನ ಸಭೆಯು ಎರಡು ದಿನಗಳ ಕಾಲ ಮುಂಬೈನಲ್ಲಿ ನಡೆದಿತ್ತು, ಇದನ್ನು ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಆಯೋಜಿಸಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಐದು ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿದ್ದರು. ಈ ಸಭೆಯ ಚರ್ಚೆಗಳಲ್ಲಿ ಮೈತ್ರಿಕೂಟವು ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಪ್ರಮುಖ ಚುನಾವಣಾ ವಿಷಯಗಳನ್ನು ಚರ್ಚಿಸಿತು, ಸಮನ್ವಯ ಸಮಿತಿಯನ್ನು ರಚಿಸಿತು. 2024ರ ಸಾರ್ವತ್ರಿಕ ಚುನಾವಣೆಗಳನ್ನು ಸಾಧ್ಯವಾದಷ್ಟು ಒಟ್ಟಾಗಿ ಹೋರಾಡಲು ಮೂರು ಅಂಶಗಳ ನಿರ್ಣಯವನ್ನು ಅಂಗೀಕರಿಸಿತ್ತು.
ಬೆಂಗಳೂರಿನಲ್ಲಿ ನಡೆದ ಎರಡನೇ ಸಭೆಯಲ್ಲಿ ಆಪ್ ಮೈತ್ರಿಕೂಟದ ಹೆಸರನ್ನು ಇಂಡಿಯನ್ ನ್ಯಾಷನಲ್ ಡೆವಲಪ್‍ಮೆಂಟ್ ಇನ್‍ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಎಂದು ಘೋಷಿಸಲಾಗಿತ್ತು. ಮೊದಲ ಸಭೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಾಟನಾದಲ್ಲಿ ಆಯೋಜಿಸಿದ್ದರು.