ಸಮಗ್ರ ನ್ಯೂಸ್: ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕೆಲವರು ದಾರಿ ತಪ್ಪಿಸುವ ಮಾಹಿತಿ ನೀಡಿದ್ದರು. ಇಂದು ನನ್ನ ಕಣ್ಣು ತೆರೆದಿದೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ ಹೆಚ್‌ಡಿಕೆ ಅವರು ಪ್ರಭಾಕರ ಭಟ್ ಅವರನ್ನು ಹಾಡಿ ಹೊಗಳಿದ್ದಾರೆ.
ಹಿಂದೆ ಒಂದು ರೀತಿಯಾಗಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಈ ಕಾರ್ಯಕ್ರಮ ಭಾಗವಹಿಸಿದ್ದು ಹೇಗೆ ಎಂದು ಕೆಲವರು ಯೋಚಿಸಬಹುದು. ಅಂದು ನನ್ನನ್ನು ಕೆಲವರು ದಾರಿ ತಪ್ಪಿಸಿದ್ದರು. ನಾನು ತಪ್ಪು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಈ ಕಾರ್ಯಕ್ರಮ ಜೀವನದ ಅವಿಸ್ಮರಣೀಯ ಕ್ಷಣ. ಇಲ್ಲಿ ಅತ್ಯುತ್ತಮ ಶಿಕ್ಷಣ ಕೊಡಲಾಗುತ್ತಿದೆ. ದೇಶದ ಕೀರ್ತಿ ಎತ್ತಿ ಹಿಡಿದ ವಿಜ್ಞಾನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಗುರುಕುಲ ಪರಂಪರೆಯನ್ನು ಸಂಸ್ಕೃತಿಗಳನ್ನು ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತಮ ಶಿಸ್ತಿನ ಬದುಕನ್ನು ಇಲ್ಲಿ ಕಲಿಸಿ ಕೊಡಲಾಗುತ್ತದೆ. ಮಾನವೀಯತೆ ವಿಕಸನವನ್ನು ಇಲ್ಲಿ ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಬಾರದೇ ಇದ್ದರೆ ಜೀವನದ ದೊಡ್ಡ ನಷ್ಟವಾಗುತ್ತಿತ್ತು. ಗ್ರಾಮೀಣ ಪ್ರದೇಶದ ಕಲೆಗಳನ್ನು ಮಕ್ಕಳಲ್ಲಿ ಮಾಡಿಸಿದ್ದಾರೆ ಎಂದರು.
ಚಂದ್ರಯಾನ ಉಡಾವಣೆಯನ್ನು ಕಣ್ಣಿಗೆ ಕಟ್ಟುವ ಹಾಗೆ ತೋರಿಸಿದ್ದೀರಿ. ಮಕ್ಕಳಿದ್ದಾಗ ರಾಮನ ಭಜನೆ ಮಾಡಿದನ್ನು ಇವತ್ತು ಮತ್ತೆ ನೆನಪಿಸಿದ್ದೀರಿ. ಪ್ರಭಾಕರ ಭಟ್ ಬದುಕಿನ ಒಳ್ಳೆಯ ನಡವಳಿಕೆ ಕಲಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕಣ್ಣು ತೆರೆಸುತ್ತಿದ್ದೀರಿ ಎಂದು ಹೇಳಿದರು.
ಕೊನೆಯಲ್ಲಿ ಕುಮಾರಸ್ವಾಮಿ ಅವರು “ಜೈ ಶ್ರೀರಾಮ್” ಎಂದು ಘೋಷಣೆ ಕೂಗಿ ತಮ್ಮ ಭಾಷಣವನ್ನು ಮುಗಿಸಿದ್ದು ವಿಶೇಷವಾಗಿತ್ತು.