Ad Widget .

ಕಾಫಿನಾಡಲ್ಲೊಂದು ಮಂಜಿನ ಸ್ವರ್ಗ| ಈ ಚಳಿಗಾಲದಲ್ಲಿ ಇಲ್ಲಿಗೊಮ್ಮೆ ಭೇಟಿ ಕೊಡ್ಲೇಬೇಕು…

ಸಮಗ್ರ ನ್ಯೂಸ್: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಈ ತಾಣ ಎಂಥವರಿಗೂ ಸ್ವರ್ಗದ ಅನುಭವ ನೀಡುತ್ತದೆ. ಅದರಲ್ಲೂ ಇಲ್ಲಿಗೆ ಡಿಸೆಂಬರ್‌ನಿಂದ ಫೆಬ್ರವರಿವೊಳಗೆ ಭೇಟಿ ನೀಡುವುದೇ ಸೂಕ್ತ. ಯಾಕೆ ಅಂತೀರಾ ಈ ವೇಳೆ ಮಂಜು ಮುಸುಕಿದ ವಾತಾವರ ಇರಲಿದ್ದು, ಈ ಮಂಜಿನಲ್ಲಿ ಸ್ವರ್ಗದಂತಿರುವ ಇಲ್ಲಿನ ಸ್ಥಳಗಳನ್ನು ನೋಡಿದರೆ ಮನಸಿಗೆ ಮುದಾ ಸಿಕ್ಕಂತಾಗುತ್ತದೆ.

Ad Widget . Ad Widget .

ವರ್ಷದ ಕೊನೆಯ ತಿಂಗಳು ಡಿಸೆಂಬರ್‌ ಸಮೀಪಿಸುತ್ತಿದ್ದು, ಇನ್ನು ಹೊಸವರ್ಷ ಆಗಮಿಸುತ್ತಿರುವ ಹಿನ್ನೆಲೆ ಚಿಕ್ಕಮಗಳೂರಿನ ಕಡೆ ಪ್ರವಾಸ ಬೆಳೆಸಿ. ಈ ವೇಳೆ ಮಂಜು ಮುಸುಕಿದ ಸ್ವರ್ಗದ ಅನುಭವ ಪಡೆಯಲು ಇಲ್ಲಿನ ತಾಣಗಳನ್ನೇ ಹೆಚ್ಚಿನ ಪ್ರವಾಸಿಗರು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಮುಳ್ಳಯ್ಯನಗಿರಿಯತ್ತ ಪ್ರವಾಸಿಗರ ದಂಡೇ ಹರಿದುಬರುತ್ತದೆ.

Ad Widget . Ad Widget .

ಹಚ್ಚಹಸಿರಿನಿಂದ ಕೂಡಿರುವ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ ಆಗಿರುವ ಇಲ್ಲಿನ ಕಾಫಿ ಹಾಗೂ ಟೀ ತೋಟಗಳು, ದಟ್ಟ ಅರಣ್ಯ ಮತ್ತು ಗಿರಿ ಶಿಖರಗಳು ಇಲ್ಲಿನ ಪ್ರಮುಖ ಆಕರ್ಷಣೆ ಆಗಿವೆ. ಇಲ್ಲಿನ ದಟ್ಟ ಪರ್ವತಗಳು ಒಂದಕ್ಕಿಂತ ಒಂದು ವಿಭಿನ್ನ ಮತ್ತು ಆಕರ್ಷಿತವಾಗಿವೆ. ಇವುಗಳಲ್ಲಿ ಮುಳ್ಳಯ್ಯನಗಿರಿ ಅತ್ಯಂತ ಸ್ವರ್ಗದಂತಿರುವ ಪ್ರಮುಖ ಆಕರ್ಷಣೀಯ ತಾಣವಾಗಿದೆ. ಇದು ಎತ್ತರದ ಶಿಖರವಾಗಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿ ಶಿಖರ ಸಮುದ್ರ ಮಟ್ಟಕ್ಕಿಂತ 1930 ಮೀಟರ್ ಎತ್ತರವಿದ್ದು, ಕರ್ನಾಟಕದ ಅತ್ಯುನ್ನತ ಶಿಖರ ಇದಾಗಿದೆ. ಚಿಕ್ಕಮಗಳೂರುವ ಜಿಲ್ಲೆ ಪ್ರಮುಖ ಆಕರ್ಷಣೆ ಆಗಿರುವ ಈ ಶಿಖರವು ಮಳೆಗಾಲ, ಚಳಿಗಾಲದಲ್ಲೂ ಪ್ರವಾಸಿಗರನ್ನು ಕೈ ಬೀಸಿ ತನ್ನತ್ತ ಕರೆಯುತ್ತಲೇ ಇರುತ್ತದೆ. ಇದು ಚಿಕ್ಕಮಗಳೂರಿನಿಂದ ಸುಮಾರು 30 ಕಿಲೋ ಮೀಟರ್‌ ದೂರದಲ್ಲಿದ್ದು, ಬೆಟ್ಟದ ತುದಿಯವರೆಗೆ ಉತ್ತಮವಾದ ರಸ್ತೆಯಿದೆ. ರಸ್ತೆ ಕಿರಿದಾದ್ದರಿಂದ ಈ ರಸ್ತೆ ಅಪಾಯಕಾರಿ ರಸ್ತೆಯೂ ಆಗಿದೆ.

ನಡೆದುಕೊಂಡು ಅಥವಾ ಸೈಕಲ್‌ನಲ್ಲಿ ಪ್ರಯಾಣ ಮಾಡುವವರಿಗೆ ಉತ್ತಮ ಪ್ರಯಾಣದ ಅನುಭವ ನೀಡುತ್ತದೆ. ಆದರೆ ಕಾರು ಅಥವಾ ಅದಕ್ಕಿಂತ ದೊಡ್ಡ ವಾಹನಗಳು ಇಲ್ಲಿ ಚಲಿಸಬೇಕು ಎಂದರೆ ಕಷ್ಟಕರವಾಗಿರುತ್ತದೆ. ಯಾಕೆಂದರೆ ಇಲ್ಲಿನ ರಸ್ತೆಗಳು ಉತ್ತಮವಾಗಿದ್ದರೂ ಕಿರಿದಾಗಿವೆ. ಅಲ್ಲದೆ ಬೆಟ್ಟ ಹತ್ತುತ್ತಿದ್ದಂತೆ ಮಂಜು ಮುಸುಕುವುದರಿಂದ ಅಪಘಾತದ ಸಂಭವ ಹೆಚ್ಚಿರುತ್ತದೆ.

ಆದ್ದರಿಂದ ಕಾರಿನಲ್ಲಿ ಪ್ರಯಾಣ ಮಾಡುವವರು ನಿಧಾನವಾಗಿ ಚಲಿಸಬೇಕಾಗುತ್ತದೆ. ಇಲ್ಲಿನ ರಸ್ತೆಯ ಕಡಿದಾದ ತಿರುವಿನಲ್ಲಿ ಕಾರುಗಳು ಚಲಿಸಲು ಕೇವಲ ಉತ್ತಮ ಚಾಲಕನಿದ್ದರೆ ಸಾಲದು ಅನುಭವ ಹಾಗೂ ಸಹನೆ ಸಹ ಇರಬೇಕಾಗುತ್ತದೆ. ಗಿರಿಯ ತುದಿಯಲ್ಲಿ ಶ್ರೀ ಗುರು ಮುಳ್ಳಪ್ಪಸ್ವಾಮಿ ತಪಸ್ಸು ಮಾಡಿದ ಗದ್ದುಗೆ ಮತ್ತು ದೇವಾಲಯವಿದೆ. ಪುಟ್ಟದಾದ ಬಸವನ ಪ್ರತಿಮೆ ಹಾಗೂ ಪಕ್ಕದಲ್ಲಿ ಗುಹೆಯಂತಹ ರಚನೆಯಿದೆ.

ಗದ್ದುಗೆ ಇರುವ ಸ್ಥಳಕ್ಕೆ 300ಕ್ಕೂ ಹೆಚ್ಚು ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ಸಾಗಬೇಕು. ಬೆಟ್ಟದ ತುದಿ ತಲುಪುತ್ತಿದ್ದಂತೆಯೇ ಮೋಡವನ್ನು ಚುಂಬಿಸುವಷ್ಟರ ಮಟ್ಟಿಗೆ ಮಂಜು ಕವಿದಿರುತ್ತದೆ. ಮೋಡಗಳ ನಡುವೆ ಚಲಿಸುತ್ತಿದ್ದರೆ ಸ್ವರ್ಗದ ದಾರಿಯಲ್ಲಿ ಚಲಿಸುತ್ತಿದ್ದೇವೆಯೇನೋ ಎಂಬ ಸ್ವರ್ಗದ ಅನುಭವ ಆಗುವುದಂತು ಸತ್ಯ.

ಬೆಟ್ಟದ ತುತ್ತ ತುದಿಯಲ್ಲಿರುವ ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಿದ್ದರೆ ಜೋರಾಗಿ ಬೀಸುವ ಗಾಳಿ ಎಲ್ಲಿ ನಮ್ಮನ್ನು ಹೊತ್ತೊಯ್ಯುತ್ತದೆಯೋ ಎನ್ನುವ ಭೀತಿ ಕೂಡ ಕಾಡಲು ಆರಂಭಿಸುತ್ತದೆ. ಈ ವೇಳೆ ನಮಗೆ ಕಾಣಸಿಗುವ ಗಿರಿ-ಕಂದರಗಳು, ಪ್ರಪಾತಗಳು ಭಯದೊಂದಿಗೆ ಅಪೂರ್ವ ಸಂತೋಷವನ್ನು ಕೂಡ ಉಂಟು ಮಾಡುತ್ತದೆ. ಚಾರಣ ಪ್ರಿಯರ ಸ್ವರ್ಗ ಎನಿಸಿಕೊಂಡಿರುವ ಮುಳ್ಳಯ್ಯನಗಿರಿ ದಕ್ಷಿಣ ಭಾರತದಲ್ಲೇ ಪ್ರಮುಖ ಚಾರಣ ಸ್ಥಳಗಳಲ್ಲಿ ಒಂದಾಗಿದೆ.

ಬೆಂಗಳೂರಿನಿಂದ 247.7 ಕಿಲೋ ಮೀಟರ್‌ ದೂರದಲ್ಲಿರುವ ಮುಳ್ಳಯ್ಯನಗಿರಿಗೆ ಮಂಗಳೂರು-ಉಜಿರೆ-ಚಾರ್ಮಾಡಿ ಮಾರ್ಗವಾಗಿ ಹೋಗಬಹುದಾಗಿದೆ. ಅಷ್ಟೇ ಅಲ್ಲದೆ ಮಂಗಳೂರು-ಕಾರ್ಕಳ-ಕಳಸ-ಬಾಳೆಹೊನ್ನೂರು ಮಾರ್ಗವಾಗಿಯೂ ಇಲ್ಲಿಗೆ ತಲುಪಬಹುದು. ಇಲ್ಲಿಗೆ ಸಾಕಷ್ಟು ಸಂಖ್ಯೆಯ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಬಸ್‍ಗಳ ಸೇವೆ ಲಭ್ಯ ಇದೆ. ಚಿಕ್ಕಮಗಳೂರು ಜಿಲ್ಲೆಯಿಂದ ಇಲ್ಲಿಗೆ ಬಾಡಿಗೆ ಟ್ಯಾಕ್ಸಿ ವ್ಯವಸ್ಥೆಯೂ ಇದೆ. ಸ್ವಂತ ವಾಹನಗಳು ಇಲ್ಲದವರು ಬಾಡಿಗೆ ವಾಹನಗಳನ್ನು ಮಾಡಿಕೊಂಡು ಈ ಸ್ಥಳವನ್ನು ತಲುಪಬಹುದಾಗಿದೆ.

Leave a Comment

Your email address will not be published. Required fields are marked *