ಸಮಗ್ರ ನ್ಯೂಸ್: ಇಲ್ಲೊಬ್ಬ ತನ್ನ ಪತ್ನಿ ಹಾಗೂ ಅಳಿಯನ ವಿರುದ್ಧ ದೂರು ನೀಡಿದ್ದು ಕಾರಣ ಮಾತ್ರ ಕುತೂಹಲಕಾರಿಯಾಗಿದೆ.
ತನ್ನ 10 ವರ್ಷದ ಮಗನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ್ದಕ್ಕಾಗಿ ವ್ಯಕ್ತಿಯೊಬ್ಬ ಪತ್ನಿ ಹಾಗೂ ಅಳಿಯನ ವಿರುದ್ಧ ದೂರು ದಾಖಲಿಸಿದ್ದಾರೆ.
ಸೂರತ್‌ನ ಕಟರ್ಗಾಮ್ ಪ್ರದೇಶದ ನಿವಾಸಿ ಜೆನಿಶ್ ರಾಥೋಡ್ ನಿರ್ಮಾಣ ಸಂಸ್ಥೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಹೆಂಡತಿ ಬೇರ್ಪಟ್ಟಿದ್ದರಿಂದ ಕಳೆದ ಎರಡು ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. 10 ವರ್ಷದ ಮಗ ರುದ್ರ ತನ್ನ ತಾಯಿ ಖುಷ್ಬು ಜತೆ ವಾಸಿಸುತ್ತಿದ್ದಾನೆ.
ತನ್ನ 10 ವರ್ಷದ ಮಗನಿಗೆ ಕಾರು ಓಡಿಸಲು ಅವಕಾಶ ಮಾಡಿಕೊಟ್ಟು ಆತನ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡಿದ್ದಾರೆ ಎಂದು ಹೆಂಡತಿ ಮತ್ತು ಅಳಿಯನ ವಿರುದ್ಧ ಜೆನಿಶ್ ದೂರು ದಾಖಲಿಸಿದ್ದಾರೆ.
ವಿವಿಧ ಕಾರಣಗಳಿಗಾಗಿ ಆಗಾಗ್ಗೆ ದಂಪತಿ ನಡುವೆ ಜಗಳವಾಗುತ್ತಿದ್ದುದರಿಂದ ಖುಷ್ಬು ತನ್ನ ಮಗ ರುದ್ರ ಜತೆ ವಲ್ಸಾದ್‌ನಲ್ಲಿರುವ ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಡಿ. 6ರಂದು ರಾಥೋಡ್ ತನ್ನ ಪತ್ನಿ ಅಪ್‌ಲೋಡ್ ಮಾಡಿದ ವಾಟ್ಸಾಪ್ ಸ್ಟೇಟಸ್ ನೋಡಿದ್ದಾರೆ. ಇದರಲ್ಲಿ ಖುಷ್ಬು ಅವರ ಸಹೋದರ ನೀರವ್ ಚಾವ್ಡಾ ಅವರ ಮಡಿಲಲ್ಲಿ ಕುಳಿತು ರುದ್ರ ಕಾರು ಚಾಲನೆ ಮಾಡುತ್ತಿದ್ದ ಚಿತ್ರ ಇತ್ತು.
ಪತ್ನಿಗೆ ಕರೆ ಮಾಡಿ ಘಟನೆಯ ಬಗ್ಗೆ ವಿಚಾರಿಸಿದ ನಂತರ ಪೊಲೀಸರನ್ನು ಸಂಪರ್ಕಿಸಿ ಖುಷ್ಬು ಹಾಗೂ ನೀರವ್ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 279 (ಸಾರ್ವಜನಿಕ ದಾರಿಯಲ್ಲಿ ದುಡುಕಿನ ಚಾಲನೆ ಅಥವಾ ಸವಾರಿ), 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯ) ಮತ್ತು 114 (ಅಪರಾಧ ನಡೆದಾಗ ಉಪಸ್ಥಿತರಿದ್ದು ಕುಮ್ಮಕ್ಕು ನೀಡುವವರು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಆಗಸ್ಟ್ 2 ರಂದು ಖುಷ್ಬು, ನೀರವ್ ಮತ್ತು ರುದ್ರ ದಮನ್‌ಗೆ ಪ್ರವಾಸಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವ್ಯಕ್ತಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ದಾರಿಯಲ್ಲಿ ರುದ್ರನನ್ನು ನೀರವ್ ತನ್ನ ಮಡಿಲಲ್ಲಿ ಕೂರಿಸಿಕೊಂಡು ಕಾರನ್ನು ಓಡಿಸಲು ಅನುವು ಮಾಡಿಕೊಟ್ಟಿದ್ದಾನೆ ಎಂದು ಹೇಳಿದ್ದಾರೆ.
ಜೆನೀಶ್ ರಾಥೋಡ್ ನೀಡಿದ ಹೇಳಿಕೆಯಂತೆ ನಾವು ಅಪರಾಧವನ್ನು ದಾಖಲಿಸಿದ್ದೇವೆ. ರುದ್ರಗೆ ನೀರವ್ ಕಾರು ಚಲಾಯಿಸಲು ಅವಕಾಶ ನೀಡಿದ್ದು ಗಂಭೀರ ಕೃತ್ಯವಾಗಿದೆ. ಘಟನೆ ನಡೆದಿದ್ದು ಎನ್ ಎಚ್-48ರಲ್ಲಿ. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪರಡಿ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜೆ. ಸರ್ವಯ್ಯ ತಿಳಿಸಿದ್ದಾರೆ.