ಸಮಗ್ರ ನ್ಯೂಸ್: ಗುಜರಾತ್ ಸೇರಿದಂತೆ ದೇಶದ ಹಲವೆಡೆ ಸಾಂಪ್ರದಾಯಿಕ ಮತ್ತು ದೈವೀಕ ನೃತ್ಯವಾಗಿರುವ ಗಾರ್ಬಾ ನೃತ್ಯವನ್ನು ‘ಮಾನವೀಯತೆಯ ಅಮೂರ್ತ ಸಾಂಸ್ಕತಿಕ ಪರಂಪರೆ (ಐಸಿಎಚ್)’ ಎಂದು ಗುರುತಿಸಿ ಯುನೆಸ್ಕೊ ಪ್ರಾತಿನಿಧಿಕ ಪಟ್ಟಿಗೆ ಸೇರಿಸಲಾಗಿದೆ. ಈ ಕುರಿತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ನವರಾತ್ರಿ ಸಮಯದಲ್ಲಿ ಹಲವೆಡೆ ಗಾರ್ಬಾ ನೃತ್ಯ ಮಾಡಲಾಗುತ್ತಿದ್ದು, ಹಳೆಯ ಪದ್ಧತಿ ಪ್ರಕಾರ ದೇವಿಯು ಗಾರ್ಬಾ ರೂಪದಲ್ಲಿ ಜೀವಂತವಾಗಿದ್ದಾರೆ ಎಂದು ಜನರು ನಂಬುತ್ತಾರೆ. ಇದು ವಿಭಿನ್ನ ಉಡುಗೆ ತೊಟ್ಟು ವೃತ್ತಾಕಾರವಾಗಿ ನೃತ್ಯ ಮಾಡುವ ಪದ್ಧತಿ ಆಗಿದೆ.
ಗಾರ್ಬಾ ನೃತ್ಯದ ಮೂಲಕ ಗುಜರಾತಿ ಸಂಸ್ಕೃತಿ ಇಡೀ ವಿಶ್ವಕ್ಕೆ ಪರಿಚಯವಾಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಸಿಗುತ್ತಿರುವ ಪ್ರಾಮುಖ್ಯತೆ. ಗುಜರಾತಿ ಜನರಿಗೆ ಅಭಿನಂದನೆಗಳು ಎಂದು ಭೂಪೇಂದ್ರ ಪಟೇಲ್ ತಿಳಿಸಿದ್ದಾರೆ.
ದೇವಿಯ ಶಕ್ತಿಯನ್ನು ಪ್ರತಿನಿಧಿಸುವ ಈ ನೃತ್ಯವನ್ನು ನವರಾತ್ರಿ ಸಮಯದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಯುನೆಸ್ಕೊ ವೆಬ್‍ಸೈಟ್‍ನಲ್ಲಿ ಹೇಳಲಾಗಿದೆ.