Ad Widget .

ಇಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿನ/ಅಂಬೇಡ್ಕರ್ ಎಂಬ ನಾವು ಮರೆತ ಅದ್ಭುತ ರಾಷ್ಟ್ರಪ್ರೇಮಿ

ವಿಶೇಷ ಲೇಖನ: ಕುಮಾರ್ ಶೇಣಿ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಮಗ್ರ ನ್ಯೂಸ್: ಅದು 25 ನವೆಂಬರ್ 1949. 2 ವರ್ಷ, 11 ತಿಂಗಳು, 18 ದಿನಗಳ ಪರಿಶ್ರಮಕ್ಕೆ ಪ್ರತಿಫಲವಾಗಿ ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಸಿದ್ಧಗೊಂಡಿತ್ತು. ಸಂವಿಧಾನ ಕರ್ತೃ ಎಂದೇ ಹೆಸರಾದ ಡಾ. ಬಿ. ಆರ್ ಅಂಬೇಡ್ಕರ್ ಸಂವಿಧಾನ ಸಮಿತಿಯ ಮುಂದೆ ಕೊನೆಯ ಮಾತುಗಳನ್ನಾಡಲು ನಿಂತುಬಿಟ್ಟಿದ್ದರು. ಎರಡಕ್ಕೂ ಅಧಿಕ ವರ್ಷಗಳ ಸಂವಿಧಾನ ನಿರ್ಮಾಣದ ಇತಿಹಾಸ, ಅದಕ್ಕೆ ಪರಿಶ್ರಮಪಟ್ಟವರ ನೆನಪು ಮಾಡಿಕೊಳ್ಳುತ್ತಾ ಕೊನೆಗೆ ಭವಿಷ್ಯದ ಭಾರತದ ಕುರಿತು ಮಾತನಾಡುತ್ತಾ, “1950ರ ಜನವರಿ 26ರಂದು ಭಾರತವೂ ಸಂಪೂರ್ಣವಾಗಿ ಸ್ವತಂತ್ರಗೊಳ್ಳಲಿದೆ. ಆದರೆ ಈ ಸ್ವಾತಂತ್ರ್ಯ ಮುಂದೇನಾಗಬಹುದು? ಭಾರತವೂ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದೇ ಅಥವಾ ಅದನ್ನು ಕಳೆದುಕೊಳ್ಳುವುದೇ? ನನ್ನ ಮನಸ್ಸನ್ನು ಕಾಡುತ್ತಿರುವ ಚಿಂತೆ ಇದು. ಭಾರತವೂ ಎಂದೂ ಸ್ವತಂತ್ರವಾಗಿ ಇರಲಿಲ್ಲ ಎಂದಲ್ಲ. ಆದರೆ ಅದು ತನ್ನ ಸ್ವಾತಂತ್ರ್ಯವನ್ನು ಹೇಗೆ ಕಳೆದುಕೊಂಡಿತು ಎಂಬುದು ನಾವು ಯೋಚಿಸಬೇಕಾದ ಸಂಗತಿ. ಭವಿಷ್ಯದ ಕುರಿತು ನನಗಿರು ಚಿಂತೆ ಇದು.”

Ad Widget . Ad Widget . Ad Widget .

“ನನಗೆ ಚಿಂತೆಯಿರುವುದು ಭಾರತವೂ ಹಿಂದೊಮ್ಮೆ ಸ್ವಾತಂತ್ರ್ಯವನ್ನು ಕಳೆದುಕೊಂಡಿತೆನ್ನುವುದಷ್ಟೇ ಅಲ್ಲ. ಅದು ತನ್ನವರದ್ದೇ ದ್ರೋಹದಿಂದ ಕಳೆದುಕೊಂಡಿತೆನ್ನುವುದು. ಸಿಂಗ್ ನ ಮೇಲೆ ದಾಳಿ ನಡೆಸಿದಾಗ, ರಾಜಾ ದಾಹಿರನ ಸೇನಾಪತಿಗಳೇ ಆಕ್ರಮಣಕಾರಿಯಿಂದ ಲಂಚ ಪಡೆದು ರಾಜನ ಪರವಾಗಿ ಹೋರಾಡದೇ ಉಳಿದುಬಿಟ್ಟರು. ಪೃಥ್ವಿರಾಜನ ವಿರುದ್ಧ ಹೋರಾಡಲು ಮಹಮ್ಮದ್ ಘೋರಿಗೆ ಬೆಂಬಲ ನೀಡಿದ್ದು ರಾಜ ಜಯಚಂದ್. ಸಿಖ್ ಅರಸರು ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾಗ, ಅವರ ಸೇನಾಪತಿ ಗುಲಾಬ್ ಸಿಂಗ್ ಯುದ್ಧದಿಂದ ದೂರ ಉಳಿದ. ಹೀಗೆ ಭಾರತೀಯರು ಸೋತಿದ್ದೆಲ್ಲವೂ ತಮ್ಮ ದೌರ್ಬಲ್ಯಗಳಿಂದಲೇ. ಇಂತಹ ಚರಿತ್ರೆ ಮರುಕಳಿಸಬಹುದೇ ಎಂಬ ಕಳವಳ ನನ್ನದು.

“ರಾಜಕೀಯ ಪಕ್ಷಗಳು ತಮ್ಮ ಸಿದ್ಧಾಂತಗಳನ್ನೇ ದೇಶಕ್ಕಿಂತ ಹೆಚ್ಚಾಗಿ ಮಾಡಿಕೊಂಡಲ್ಲಿ ನಮ್ಮ ಸ್ವಾತಂತ್ರ್ಯವೂ ಪನರ್ಹ ಅಪಾಯಕ್ಕೆ ಒಳಗಾದೀತು. ಏನೇ ಆದರೂ ಅಂತಹ ಅಪಾಯಕ್ಕೆ ಒಳಗಾಗದಂತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ” ಎಂಬುದು ರಾಷ್ಟ್ರಹಿತವೇ ಅಂತಿಮ ಎಂಬ ಅಂಬೇಡ್ಕರ್ ಅವರ ಮಾತುಗಳು.


ತಾವೂ ಮತಾಂತರಗೊಳ್ಳುವುದಾಗಿ ಬಾಬಾ ಸಾಹೇಬರು 1935ರಲ್ಲಿ ಘೋಷಿಸಿಕೊಮಡರೂ, ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು 1956ರಲ್ಲಿ. ಅಂದರೆ ತಮ್ಮ ಜೀವನದ ಸಂಧ್ಯಾಕಾಲದಲ್ಲಿ. ಮಧ್ಯದ ಎರಡು ದಶಕಗಳ ಕಾಲ ಹಿಂದುಳಿದವರ ಏಳಿಗೆಗಾಗಿ ದುಡಿಯುತ್ತಾರೆ. ಬೌದ್ಧ ಧರ್ಮ ಸ್ವೀಕಾರದ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಹೀಗೆ ಪ್ರಶ್ನಿಸಿದರಂತೆ, “ ಹಿಂದೂ ಧರ್ಮದಲ್ಲಿಯೇ ವಿಶ್ವ ತತ್ವಗಳಿರುವಾಗ ಇನ್ನೊಂದು ಮತಕ್ಕೆ ಯಾಕೆ ಸೇರಬೇಕು” ಎಂದು.
ಅದಕ್ಕೆ ಅಂಬೇಡ್ಕರ್, “ಈ ಪ್ರಶ್ನೆಗೆ ಉತ್ತರ ಕೊಡಬೇಕಾದವರು ನಾನಲ್ಲ, ನೀವು. ಅಸ್ಪೃಶ್ಯತೆಯ ವಿಚಾರದಲ್ಲಿ ನನಗೂ, ಗಾಂಧಿಯವರಿಗೂ ಭಿನ್ನಾಭಿಪ್ರಾಯಗಳು ಇತ್ತು. ಆದರೆ ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ನಾಡಿನ ಹಿತಕ್ಕೆ ಧಕ್ಕೆಯಾಗದಂತೆ ಹೋರಾಡುತ್ತೇನೆ ಎಂದು ಅವರಲ್ಲಿ ವಾಗ್ಧಾನ ಮಾಡಿದ್ದೇನೆ. ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಆ ಮಾತನ್ನು ಉಳಿಸಿಕೊಂಡಿದ್ದೇನೆ. ಬೌದ್ಧ ಧರ್ಮ ಭಾರತೀಯ ಸಂಸ್ಕತಿಯ ಅವಿಭಾಜ್ಯ ಅಂಗವಾಗಿದೆ. ಈ ನಾಡಿನ ಸಂಸ್ಕತಿಗೆ, ಪರಂಪರೆಗೆ ನನ್ನ ನಡೆಯಿಂದ ಹಾನಿಯುಂಟಾಗುವುದಿಲ್ಲ’ ಎಂದುಬಿಟ್ಟರು.


ಅದು ಸ್ವಾತಂತ್ರ್ಯ ಸಿಕ್ಕಿದ ಸಮಯ. ಸ್ವರ್ಗ ಎನಿಸಿಕೊಂಡಿದ್ದ ಕಾಶ್ಮೀರ ಅಕ್ಷರಶಃ ನರಕವಾಗಿತ್ತು. ಕಾಶ್ಮೀರದ ಆಡಳಿತ ಎಂಬುದು ಗೊದಲಗಳ ಗೂಡಾಗಿತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂಬ ಪ್ರಸ್ತಾಪದೊಂದಿಗೆ ಶೇಖ್ ಅಬ್ಧುಲ್ಲಾ ನೆಹರೂ ಹಹತ್ತಿರ ಬಂದಿದ್ದರು. ನೆಹರೂ ಸಲಹೆಯಂತೆ ಅಂಬೇಡ್ಕರ್ ಅವರ ಹತ್ತಿರವೂ ಬಂದುಬಿಟ್ಟರು. ಅದಕ್ಕೆ ಅಂಬೇಡ್ಕರ್ ಅವರ ಉತ್ತರ ಹೀಗಿತ್ತು.

“ಮಿಸ್ಟರ್ ಅಬ್ಧುಲ್ಲಾ, ಭಾರತವೂ ಕಾಶ್ಮೀರವನ್ನು ರಕ್ಷಿಸಬೇಕೆಂದು ನೀವೂ ಬಯಸುತ್ತೀರಿ. ನಿಮ್ಮ ಗಡಿಯನ್ನು ಭಾರತವೂ ರಕ್ಷಿಸಬೇಕೆಂದು ಹೇಳುತ್ತೀರಿ. ಭಾರತವೂ ನಿಮ್ಮ ನೆಲದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಬೇಕೆಂದು ಅಪೇಕ್ಷೆ ಪಡುತ್ತೀರಿ. ಭಾರತವೇ ಕಾಶ್ಮೀರಕ್ಕೆ ಅನ್ನ, ಆಹಾರವನ್ನು ನೀಡಬೇಕೆಂತಲೂ ಹೇಳುತ್ತೀರಿ ಮತ್ತು ಭಾರತದ ಬೇರೆ ಬೇರೆ ಭಾಗಗಳಲ್ಲಿ ವಾಸಿಸುವ ಕಾಶ್ಮೀರಿಗಳಿಗೆ ಭಾರತೀಯರಂತೆ ಸಮಾನ ಹಕ್ಕಿರಬೇಕೆಂದು ಹೇಳುತ್ತೀರಿ. ಆದರೆ ಕಾಶ್ಮೀರದಲ್ಲಿ ಭಾರತ ಸರ್ಕಾರಕ್ಕೆ, ಭಾರತದ ನಾಗರಿಕರಿಗೆ ಯಾವುದೇ ಹಕ್ಕು, ಅಧಿಕಾರಗಳನ್ನು ನೀಡಲು ನಿರಾಕರಿಸುತ್ತೀರಿ. ನಿಮಗೆ ಗೊತ್ತಿರಲಿ, ನಾನು ಭಾರತದ ಕಾನೂನು ಮಂತ್ರಿಯಾಗಿ ಭಾರತ ದೇಶಕ್ಕೆ ಯಾವುದೇ ರೀತಿಯ ವಂಚನೆಯಾಗಲು ಬಿಡುವುದಿಲ್ಲ.” ಇದು ಅಂಬೇಡ್ಕರ್ ಅವರ ದೇಶಪ್ರೇಮ. 

ಸ್ವತಂತ್ರ ಭಾರತದ ಆರಂಭದ ದಿನಗಳು. ಮುಂಬೈನಲ್ಲಿ ಒಂದು ರಾಜಕೀಯ ಸಭೆ ನಡೆಯುತ್ತಿತ್ತು. ಭಾರತದ ಮೊದಲ ಪ್ರಧಾನಿ ನೆಹರು, ಮೊರಾರ್ಜಿ ಯಂತಹವರ ಜೊತೆ ಅಂಬೇಡ್ಕರ್ ಕೂಡ ಭಾಗವಹಿಸಿದ್ದರು. ಆಗಿನ ಬಾಂಬೆ ರಾಜ್ಯದ ಮೊದಲ ಮುಖ್ಯಮಂತ್ರಿ ಆಗಿದ್ದ ಬಿ. ಜಿ. ಖೇರ್ ತನ್ನ ಭಾಷಣದ ನಡುವಿನಲ್ಲಿ “ನಾನು ಮೊದಲ ಭಾರತೀಯ, ನಂತರ ಮಹಾರಾಷ್ಟ್ರಿಗ” ಎಂದು ಬಿಟ್ಟರು. ನಂತರ ಮಾತಿಗೆ ನಿಂತ ಡಾ. ಬಿ. ಆರ್. ಅಂಬೇಡ್ಕರ್ ಹೇಳಿದ್ದು ಒಂದೇ ಸಾಲು, “ನಾನು ಮೊದಲು ಭಾರತೀಯ ಹಾಗೂ ಅದೇ ಅಂತಿಮ”. ಇದು ಅಂಬೇಡ್ಕರ್ ಅವರ ರಾಷ್ಟ್ರ ಪ್ರೇಮದ ಪರಿ. 

1954ರ ಆಕ್ಟೋಬರ್ 3 ರಂದು ಆಕಾಶವಾಣಿಯಿಂದ ಪ್ರಸಾರವಾಗಿದ್ದ ಭಾಷಣದಲ್ಲಿ ಕೇಳಿ ಬಂದ ಅಂಬೇಡ್ಕರ್ ಅವರ ಮಾತುಗಳು: ಹಿಂದುಗಳಿಗೆ ವೇದಗಳು ಬೇಕಾಗಿದ್ದವು; ಆಗ ಅವರು ಕೆಳಜಾತಿಯವನಾದ ವ್ಯಾಸರನ್ನು ಕರೆದರು. ಅವರಿಗೊಂದು ಮಹಾಕಾವ್ಯ ಬೇಕಾಗಿತ್ತು. ಆಗ ಅವರಿಗೆ ಕೆಳಜಾತಿಯ ವಾಲ್ಮೀಕಿ ನೆನಪಾದ. ಇದೀಗ ಅವರಿಗೆ ಆಡಳಿತದ ಸಂವಿಧಾನ ಅಗತ್ಯವೆನಿಸಿದೆ; ಅದಕ್ಕಾಗಿ ನನ್ನನ್ನು ಕರೆದರು.”

ಇವೆಲ್ಲವೂ ಮಹಾನಾಯಕ ಅಂಬೇಡ್ಕರ್ ಅವರ ರಾಷ್ಟ್ರ ಭಕ್ತಿಗೆ ಉದಾಹರಣೆಗಳು ಅಷ್ಟೇ. ತನ್ನ ಬದುಕೆಲ್ಲವನ್ನೂ ಭಾರತಕ್ಕೆ ಸಮರ್ಪಿಸಿಕೊಂಡ ಸಂತನ ಬದುಕು ಇದು. ‘ಸಂವಿಧಾನ ದುರುಪಯೋಗವಾಗುತ್ತದೆ ಎಂಬುದೇನಾದರೂ ನನಗನಿಸಿದರೆ, ಅದನ್ನು ಸುಟ್ಟುಹಾಕುವಲ್ಲಿ ಕೂಡ ನಾನೆ ಮೊದಲಿಗನು’ ಎಂಬ ಅವರ ಮಾತುಗಳು ಭಾರತ ದೇಶದ ಮೇಲಿನ ಕಳಕಳಿಯ ಸೂಚನೆಗಳಷ್ಟೇ.

ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದನ್ನು ರಚಿಸಬೇಕು ಎಂಬ ಪ್ರಶ್ನೆಗಿಂತ, ಅದನ್ನು ರಚಿಸುವವರು ಯಾರು ಎಂಬುದೇ ದೊಡ್ಡ ಪ್ರಶ್ನೆ ಆಗಿತ್ತು. ನೆಹರು ಮತ್ತು ವಲ್ಲಭಭಾಯಿ ಪಟೇಲ್ ಆ ಕೆಲಸವನ್ನು ಸರ್ ಝ್ವೋರ್ ಜೆನ್ನಿಂಗ್ ಅವರಿಗೆ ವಹಿಸಲು ಸಿದ್ಧರಾಗಿದ್ದರು. ಇದನ್ನು ಅರಿತ ಗಾಂಧಿ, ಭಾರತದಲ್ಲಿ ಸಂವಿಧಾನವನ್ನು ರಚಿಸುವವರು ಯಾರು ಇಲ್ಲವೇನು ಎಂದು ಪ್ರಶ್ನಿಸಿದ್ದರು. ಕೊನೆಗೆ ಗಾಂಧಿಯೇ ಸೂಚಿಸಿದ ವ್ಯಕ್ತಿ, ಅಂಬೇಡ್ಕರ್. ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ರಚಿಸಿಕೊಟ್ಟ ಹೆಗ್ಗಳಿಕೆಯೂ ಅವರದೇ.

ಹಾಗಾದರೆ ಅಂಬೇಡ್ಕರ್ ಅವರನ್ನು ನಾವು ಮರೆತದ್ದು ಎಲ್ಲಿ ಎಂಬುದು ಯೋಚಿಸಬೇಕಾದ ವಿಚಾರ. ಇಂತಹ ರಾಷ್ಟ್ರಭಕ್ತ ಅಂಬೇಡ್ಕರ್ ಕೇವಲ ಮೀಸಲಾತಿ ಹೋರಾಟಗಾರ, ಒಂದು ವರ್ಗದ ಪ್ರತಿಪಾದಕ, ಸಂವಿಧಾನ ನಿರ್ಮಾತೃ ಎಂದಷ್ಟೇ ಗುರುತಿಸಿಕೊಂಡಿದ್ದು ಹೇಗೆ. ಭಾರತವನ್ನೇ ಪ್ರತಿನಿಧಿಸಬೇಕಾದ ಅಂಬೇಡ್ಕರ್ ಮರೆಯಾಗಿದ್ದು ಎಲ್ಲಿ ಮತ್ತು ಹೇಗೆ ಎಂಬುದು ನಾವೆಲ್ಲರೂ ಚಿಂತಿಸಬೇಕಾದ ವಿಚಾರವೇ. 1952 ಮತ್ತು 54ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಂಬೇಡ್ಕರ್ ಸೋತುಬಿಟ್ಟರು ಎಂಬುದು ನಮಗೆಲ್ಲರಿಗೂ ನೋವಿನ ವಿಚಾರವೇ. ದೇಶಕ್ಕೆ ಸಂವಿಧಾನ ಕೊಟ್ಟ ವ್ಯಕ್ತಿಗೆ, ನಾವು ಭಾರತ ರತ್ನವನ್ನು ಕೊಟ್ಟದ್ದು 1990ರಲ್ಲಿ. ಅದು ಅಂಬೇಡ್ಕರ್ ಮರಣ ಹೊಂದಿದ 34 ವರ್ಷಗಳ ನಂತರ.

ಇಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿನ. ಮರೆತೆನೆಂದರೂ ಮರೆಯಲಾರದ ವ್ಯಕ್ತಿಯೊಬ್ಬ ಇತಿಹಾಸದ ಪುಟಗಳಲ್ಲಿ ಮರೆಯಾಗಿ ದಶಕಗಳೇ ಕಳೆದುಹೋದವು. ಸಂವಿಧಾನ ಶಿಲ್ಪಿ ಎಂಬ ಅಂಬೇಡ್ಕರ್ ನಮಗೆ ನೆನಪಾಗಿದ್ದಾರೆ. ಆದರೆ ಅದನ್ನು ಮೀರಿದ ರಾಷ್ಟ್ರಭಕ್ತ ಅಂಬೇಡ್ಕರ್ ನಮಗೆ ನೆನಪಾಗಲಿಲ್ಲ. ಕೆಲವೇ ವ್ಯಕ್ತಿಗಳಿಗೆ ಸೀಮಿತವಾದ ಭಾರತದ ಇತಿಹಾಸದಲ್ಲಿ, ನೈಜ ಭಾರತೀಯ ಎನಿಸಿಕೊಂಡ ಅಂಬೇಡ್ಕರ್ ಅವರನ್ನು ಹುಡುಕುವ ಕೆಲಸ ಆಗಬೇಕಿದೆ. ಆಗಷ್ಟೇ ಈ ದೇಶದ ಭವ್ಯ ಇತಿಹಾಸ ತೆರೆದುಕೊಳ್ಳುತ್ತದೆ. ಅಂಬೇಡ್ಕರ್ ಅವರಂತಹ ಮಹಾನ್ ರಾಷ್ಟ್ರಪ್ರೇಮಿಗಳು ಕಾಣಸಿಗುತ್ತಾರೆ. ಆ ಕೆಲಸ ಆಗಬೇಕಿದೆಯಷ್ಟೇ.

Leave a Comment

Your email address will not be published. Required fields are marked *