Ad Widget .

ದೇಶದೊಳಗಿನ ಸೈನಿಕರೇ ಗೃಹರಕ್ಷಕರು

ಸಮಗ್ರ ನ್ಯೂಸ್: ಗೃಹರಕ್ಷಕ ದಳ ಎನ್ನುವುದು ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುವ ಸರ್ಕಾರದ ಅಧೀನದಲ್ಲಿರುವ ಸ್ವತಂತ್ರವಾದ ಶಿಸ್ತುಬದ್ಧವಾದ ಸಮವಸ್ರದಾರಿ ಸ್ವಯಂಸೇವಕರ ಸೇವಾ ಸಂಸ್ಥೆ ಆಗಿರುತ್ತದೆ.

Ad Widget . Ad Widget .

‘ನಿಷ್ಕಾಮ ಸೇವೆ’ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದ ಆಸ್ತಿಪಾಸ್ತಿ ರಕ್ಷಣೆ ಮತ್ತು ಜನರ ಜೀವದ ರಕ್ಷಣೆ ಮಾಡುವ ದೇಶದೊಳಗಿನ ಸೈನಿಕರೇ ನಮ್ಮ ಗೃಹರಕ್ಷಕರು. ಹೇಗೆ ದೇಶದ ಗಡಿಗಳಲ್ಲಿ ಸೈನಿಕರು ನಮ್ಮ ದೇಶವನ್ನು ವೈರಿಗಳಿಂದ ಮತ್ತು ನೆರೆಹೊರೆಗಳ ದೇಶಗಳಿಂದ ರಕ್ಷಿಸುತ್ತಾರೋ ಹಾಗೆ, ನಮ್ಮ ದೇಶದೊಳಗೆ ಇದ್ದುಕೊಂಡು ದೇಶದೊಳಗೆ ನಡೆಯುವ ದೇಶದ್ರೋಹಿ ಚಟುವಟಿಕೆಗಳನ್ನು ಅಥವಾ ಇನ್ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ನಿರಂತರವಾಗಿ ಗಮನಿಸುತ್ತಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸಂದೇಶ ನೀಡುವ ನಿಸ್ವಾರ್ಥ ಸ್ವಯಂ ಸೇವಕರೇ ನಮ್ಮ ಹೆಮ್ಮೆಯ ಗೃಹರಕ್ಷಕರು.

Ad Widget . Ad Widget .

ದೇಶದಲ್ಲಿ ಯಾವುದಾದರೂ ಪ್ರಾಕೃತಿಕ ವಿಕೋಪ ಮತ್ತು ಮಾನವ ನಿರ್ಮಿತ ದುರಂತಗಳಾದ ಸಂದರ್ಭದಲ್ಲಿ ಮುನ್ನೆಲೆಯಲ್ಲಿ ನಿಂತು ಪೊಲೀಸ್ ಇಲಾಖೆ ಸ್ಥಳೀಯ ಆಡಳಿತಕ್ಕೆ ಸದಾ ಸಹಕಾರ ನೀಡುವ ಆಪದ್ಭಾಂದವರೇ ನಮ್ಮ ನೆಚ್ಚಿನ ಗೃಹರಕ್ಷಕರು. ನೈಸರ್ಗಿಕ ದುರಂತಗಳಾದ ನೆರೆ, ಭೂಕಂಪ, ಸುನಾಮಿ, ಪ್ರಳಯ, ಸೈಕ್ಲೋನ್, ಸಾಂಕ್ರಾಮಿಕ ರೋಗ ಉಂಟಾದಾಗ ಜನರನ್ನು ರಕ್ಷಿಸುವಲ್ಲಿ ಮತ್ತು ಜನರಿಗೆ ಧೈರ್ಯ ನೀಡುವ ಕೆಲಸವನ್ನು ಗೃಹರಕ್ಷಕರು ಮಾಡುತ್ತಾರೆ. ಅದೇ ರೀತಿ ಮಾನವ ನಿರ್ಮಿತ ದುರಂತಗಳಾದ ರೈಲ್ವೇ ಅಪಘಾತ, ವಿಮಾನ ಅಫಘಾತ, ಕಟ್ಟಡ ಕುಸಿತ, ಅನಿಲ ಗ್ಯಾಸ್ ಸ್ಫೋಟ, ಅನಿಲ ಸೋರಿಕೆ, ವೈಮಾನಿಕ ದಾಳಿ, ಯುದ್ಧದ ಸಂದರ್ಭಗಳಲ್ಲಿ, ಬೆಂಕಿ ದುರಂತದ ಸಂದರ್ಭಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಲ್ಲಿ ಸಮುದಾಯಕ್ಕೆ ಬೇಕಾದ ನೆರವು ನೀಡುವುದಲ್ಲದೆ, ಪೊಲೀಸ್ ಇಲಾಖೆ ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ತಂಡಕ್ಕೆ ಹೆಗಲು ಕೊಟ್ಟು ಮಾಡುವ ದೇಶದೊಳಗಿನ ಸೈನಿಕರೇ ನಮ್ಮ ಹೆಮ್ಮೆಯ ಗೃಹರಕ್ಷಕರು. ಒಟ್ಟಿನಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ನೆಮ್ಮದಿಯನ್ನು ಪುನರ್‍ಸ್ಥಾಪಿಸುವಲ್ಲಿ ಗೃಹರಕ್ಷಕರು ಮುತುವಜಿಯಿಂದ ಕೆಲಸ ಮಾಡುತ್ತಾರೆ ಎಂದರೆ ತಪ್ಪಾಗಲಾರದು.

ಚರಿತ್ರೆ:-
ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ಜರ್ಮನಿಯ ಹಿಟ್ಲರ್ ನ ನಾಜಿ ಸೈನ್ಯವನ್ನು ಹಿಮ್ಮೆಟ್ಟಿಸಲು ಪೊಲೀಸ್ ಮತ್ತು ಮಿಲಿಟ್ರಿ ಪಡೆಗೆ ಸಮಾನವಾಗಿ ಕೆಲಸ ಮಾಡಲು ಮತ್ತು ಸಹಕರಿಸಲು ಪರ್ಯಾಯವಾಗಿ ಬ್ರಿಟನ್ ದೇಶದ ಜನರು ದೇಶ ರಕ್ಷಿಸಲು ಸ್ಥಳೀಯ ರಕ್ಷಣಾ ಪಡೆ (LDV ಅಂದರೆ Local defence volunteer)) ಎಂಬುದಾಗಿ ಗುರುತಿಸಿಕೊಂಡು ದೇಶದ ರಕ್ಷಣೆಗೆ 1940ರಲ್ಲಿ ಮುಂದಾದರು. ಇದೇ ಬ್ರಿಟನ್‍ನ ಕೊನೆ ಹಂತದ ರಕ್ಷಣಾ ವ್ಯವಸ್ಥೆ ಆಗಿತ್ತು. 1940 ಮೇ 14ರಂದು ಬ್ರಿಟನ್ ರೇಡಿಯೋಗಳಲ್ಲಿ ಸ್ಥಳೀಯ ರಕ್ಷಣಾ ಕಾರ್ಯಕರ್ತರಾಗಿ ಸೇರಲು ಸಂದೇಶ ನೀಡಲಾಯಿತು. ಮುಂದೆ 1940 ಆಗಸ್ಟ್ 23ರಂದು ವಿನ್ಸೆಂಟ್ ಚರ್ಚಿಲ್ ಸ್ಥಳೀಯ ಕಾರ್ಯಕರ್ತರನ್ನು ಹೋಮ್‍ಗಾರ್ಡ್ ಎಂದು ಮರು ನಾಮಕರಣ ಮಾಡಿದರು.
ನಮ್ಮ ಭಾರತ ದೇಶದಲ್ಲಿ ಬಾಂಬೆ ರಾಜ್ಯದಲ್ಲಿ 1946ರಲ್ಲಿ ದೇಶ ರಕ್ಷಣೆಗಾಗಿ ನೌಕಾದಳ, ಭೂಸೇನೆ ಮತ್ತು ವಾಯು ದಳಕ್ಕೆ ಸಹಾಯ ಮಾಡಲು ಮತ್ತು ತುರ್ತು ಸಂದರ್ಭಗಳಲ್ಲಿ ದೇಶ ರಕ್ಷಣೆ ಮಾಡುವ ಉದ್ದೇಶದಿಂದ ಡಿಸೆಂಬರ್ 6 ರಂದು ಗೃಹರಕ್ಷಕ ದಳ ಮತ್ತು ಪೌರಕ್ಷಣಾ ಪಡೆ ಅಸ್ತಿತ್ವಕ್ಕೆ ಬಂದಿತ್ತು. ಈ ಕಾರಣಗಳಿಂದ ಡಿಸೆಂಬರ್ 6ರಂದು ಗೃಹರಕ್ಷಕ ರೈಸಿಂಗ್ ದಿನ ಅಥವಾ ಗೃಹರಕ್ಷಕರ ದಿನಾಚರಣೆ ಎಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಮುಂದೆ ಸ್ವತಂತ್ರಾ ನಂತರ ದಿನಗಳಲ್ಲಿ ಮೊರಾರ್ಜಿ ದೇಸಾಯಿಯವರು ಪ್ರದಾನಿಯಾಗಿದ್ದಾಗ ಗೃಹರಕ್ಷಕ ದಳವನ್ನು ಗೃಹ ಇಲಾಖೆಯ ಅಡಿಯಲ್ಲಿ ಸೇರಿಸಿದರು ಮತ್ತು ಗ್ರಹ ರಕ್ಷಕ ಕಾಯಿದೆ ಹಾಗೂ ಕಾಯ್ದೆ ಕಾನೂನನ್ನು ಜಾರಿಗೊಳಿಸಲಾಯಿತು. ಆದರೆ ಆಗ ಸಾಮಾನ್ಯ ಧಿರಿಸಿನಲ್ಲಿಯೇ ಗೃಹರಕ್ಷಕರು ಕೆಲಸ ಮಾಡುತ್ತಿದ್ದರು. ಮುಂದೆ ಕ್ರಮೇಣ ದೇಶದೆಲ್ಲೆಡೆ ಗೃಹರಕ್ಷಕ ದಳವನ್ನು ಆರಂಭಿಸಲಾಯಿತು. ನಂತರ 1962ರಲ್ಲಿ ಭಾರತ-ಚೀನಾ ಯುದ್ಧದ ಸಮಯದಲ್ಲಿ ಈ ಸ್ವಯಂ ಸೇವಕರನ್ನು ದೇಶ ರಕ್ಷಣೆಗಾಗಿ ಬಳಸುವ ಉದ್ದೇಶದಿಂದ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ರಾಜ್ಯಗಳ ಸ್ವಯಂಸೇವಕರ ತಂಡಕ್ಕೆ ಖಾಕಿ ಸಮವಸ್ತ್ರ ನೀಡಿ ಅಧಿಕೃತವಾಗಿ ಮನ್ನಣೆ ನೀಡಿತ್ತು.
ಈಗ ನಮ್ಮ ದೇಶದ ಎಲ್ಲಾ 28 ರಾಜ್ಯಗಳಲ್ಲಿ ಕೇರಳ ಹೊರತುಪಡಿಸಿ 8 ಕೇಂದ್ರಾಡಳಿತ ರಾಜ್ಯಗಳಲ್ಲಿ ಗೃಹರಕ್ಷಕರಿದ್ದು ದೇಶದಾದ್ಯಂತ ಒಟ್ಟು ಸುಮಾರು 6 ಲಕ್ಷ ಗೃಹರಕ್ಷಕರು ಇದ್ದಾರೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು 28 ಸಾವಿರ ಗೃಹರಕ್ಷಕರು ಕೆಲಸ ಮಾಡುತ್ತಿದ್ದಾರೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 1000 ಗೃಹರಕ್ಷಕರಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶದ ಗೃಹರಕ್ಷಕ ಎಂಬುದಾಗಿ 2 ವಿಭಾಗವಿದ್ದು, ಇದರ ಜೊತೆಗೆ ಗಡಿ ರಕ್ಷಣಾ ಗೃಹರಕ್ಷಕ ಪಡೆ (Border wing) ಗಡಿ ಪ್ರದೇಶ ಜಾಸ್ತಿ ಇರುವ ರಾಜ್ಯಗಳಾದ ಪಂಜಾಬ್, ರಾಜಸ್ಥಾನ್, ಗುಜರಾತ್, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ತ್ರಿಪುರದಲ್ಲಿ ಹೆಚ್ಚು ಕ್ರಿಯಾತ್ಮಕವಾಗಿ ಇದ್ದಾರೆ.

ಯಾರು ಸೇರಬಹುದು?
ದೇಶ ಸೇವೆ ಮಾಡಬೇಕು ಎನ್ನುವ ತುಡಿತ ಇರುವ ಮತ್ತು ಸ್ವಯಂಸೇವಾ ಮನೋಭಾವ ಇರುವ ಸಮಾಜದ ಎಲ್ಲಾ ಸ್ತರದ ವ್ಯಕ್ತಿಗಳು ಯಾವುದೇ ಜಾತಿ, ಮತ, ಪಂಗಡ, ಧರ್ಮ ಲಿಂಗ ಭೇದವಿಲ್ಲದೆ ಸೇರಬಹುದಾಗಿದೆ. 19 ರಿಂದ 50 ವರ್ಷದ ಒಳಗಿರಬೇಕು ಮತ್ತು ಕನಿಷ್ಟ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಆಗಿರಬೇಕು. ದೈಹಿಕ ಅಂಗವಿಕಲತೆ ಇರಬಾರದು ಮತ್ತು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು. ಯಾವುದೇ ರೀತಿಯ ಅಪರಾಧ ಹಿನ್ನೆಲೆ ಇರಬಾರದು. ಹೀಗೆ ಆಯ್ಕೆಯಾದ ಗೃಹರಕ್ಷಕರಿಗೆ 10 ದಿನಗಳ ಮೂಲ ತರಬೇತಿ ನೀಡಲಾಗುತ್ತದೆ. ನೆರೆ ರಕ್ಷಣೆ, ಅಗ್ನಿಶಮನ ತರಬೇತಿ, ಪ್ರಥಮ ಚಿಕಿತ್ಸೆ, ರೈಫಲ್ ಟ್ರೈನಿಂಗ್, ವಯರ್‍ಲೆಸ್ ತರಬೇತಿ, ಸಂಚಾರ ನಿಯಂತ್ರಣ, ಶಸ್ತ್ರಾಸ್ತ್ರ ತರಬೇತಿ ಮೊದಲಾದ ತರಬೇತಿ ನೀಡಿ ತುರ್ತು ಸಂದರ್ಭಗಳಲ್ಲಿ ಅವರನ್ನು ಸೇವೆಗೆ ಬಳಸಿಕೊಳ್ಳಲಾಗುತ್ತದೆ.

ಕೊನೆಮಾತು:
‘ನಿಷ್ಕಾಮ ಸೇವೆ ಸೇವೆಯೇ ಪರಮಗುರಿ’ ಎಂಬ ಉದಾತ್ತ ಮನೋಭಾವದಿಂದ ದೇಶ ಸೇವೆ ಮಾಡುತ್ತಾ ಜೀವನದ ಸಾರ್ಥಕತೆ ಮತ್ತು ಧನ್ಯತೆಯನ್ನು ಅನುಭವಿಸುವ ಸ್ವಯಂಸೇವಾ ಕಾರ್ಯಕರ್ತರೇ ಗೃಹರಕ್ಷಕರು ಎಂದರೆ ಅತಿಶಯೋಕ್ತಿಯಾಗದು. ತಮ್ಮ ವೃತ್ತಿಯ ಜೊತೆಗೆ ತಮ್ಮ ದಿನದ ಒಂದಷ್ಟು ಘಂಟೆಯನ್ನು ದೇಶಕ್ಕಾಗಿ ಮುಡಿಪಾಗಿಡುವ ಈ ಗೃಹರಕ್ಷಕರು ನಿಜವಾಗಿಯೂ ಒಂದು ರೀತಿಯ ಆಪದ್ಭಾಂಧವರೇ. ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ವಿಧಿವಿಜ್ಞಾನ, ಕಾರಾಗೃಹ, ಅಗ್ನಿಶಾಮಕ ಇಲಾಖೆ, ಸರ್ಕಾರಿ ಪಹರೆ ಕರ್ತವ್ಯ, ದೇವಸ್ಥಾನ ಪಹರೆ, ರೈಲ್ವೇ ಇಲಾಖೆ ಹೀಗೆ ಹತ್ತು ಹಲವು ಇಲಾಖೆಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ದೇಶಕ್ಕೆ ಅಳಿಲು ಸೇವೆ ಸಲ್ಲಿಸುವವರೇ ನಮ್ಮ ಗೃಹರಕ್ಷಕರು. ವೈದ್ಯರು, ವಕೀಲರು,ಶಿಕ್ಷಕರು, ಇಂಜಿನಿಯರ್ ಗಳು, ಕೂಲಿ ಕಾರ್ಮಿಕರು,ಗುಮಾಸ್ತರು, ಸರ್ಕಾರಿ ಅಧಿಕಾರಿಗಳು ಹೀಗೆ ಸಮಾಜದ ಎಲ್ಲಾ ಸ್ತರದ, ವರ್ಗದ ಜನರು ಯಾವುದೇ ಜಾತಿ ಮತ ಭೇದವಿಲ್ಲದೆ ಒಟ್ಟಾಗಿ ದೇಶ ಸೇವೆ ಮಾಡುತ್ತಾ ಸಾರ್ಥಕ್ಯವನ್ನು ಪಡೆಯುವ ವಿಶೇಷವಾದ ಸ್ವಯಂಸೇವಾ ಸಂಸ್ಥೆಯೇ ಗೃಹರಕ್ಷಕ ದಳ ಎಂದರೆ ತಪ್ಪಾಗಲಾರದು. ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮ ದೇಶದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ನೈತಿಕ ಬೆಳವಣಿಗೆ ಹಾಗೂ ದೇಶದ ಭದ್ರತೆಗೆ ಸದಾ ಕಾಲ ಶ್ರೀಗಂಧದ ಕೊರಡಿನಂತೆ ಸೇವೆ ಸಲ್ಲಿಸುತ್ತಾ ದೇಶದ ಸರ್ವಾಂಗೀಣ ಬೆಳವಣಿಗೆಗೆ ತಮ್ಮದೇ ಆದ ಕಿರು ಕಾಣಿಕೆ ನೀಡುವವರೇ ನಮ್ಮ ಶಿಸ್ತಿನ ಸಿಪಾಯಿಗಳಾದ ಹೆಮ್ಮೆಯ ಗೃಹರಕ್ಷಕರು. ಇಂತಹ ಗೃಹರಕ್ಷಕರಿಗೆ ಡಿಸೆಂಬರ್ 6 ರ ಗೃಹರಕ್ಷಕ ದಿನದಂದು ಒಂದು ಮನದಾಳದ ಧನ್ಯವಾದ ಸಮರ್ಪಿಸಿದಲ್ಲಿ ಅವರಿಗೆ ಮತ್ತಷ್ಟು ಹುರುಪಿನಿಂದ,. ಹುಮ್ಮಸ್ಸಿನಿಂದ ದೇಶಕ್ಕಾಗಿ ಸೇವೆ ಸಲ್ಲಿಸಲು ಹೆಚ್ಚಿನ ಚೈತನ್ಯ ಹಾಗೂ ಶಕ್ತಿ ತುಂಬಬಹುದು. ಹಾಗಾದಲ್ಲಿ ಮಾತ್ರ ಈ ಗೃಹರಕ್ಷಕ ದಳದ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬಂದು ಅರ್ಥಪೂರ್ಣವಾಗಬಹುದು.
ಜೈ ಹಿಂದ್

ಡಾ|| ಮುರಲೀ ಮೋಹನ್ ಚೂಂತಾರು
ಸಮಾದೇಷ್ಟರು
ಜಿಲ್ಲಾ ಗೃಹರಕ್ಷಕ ದಳ ಮಂಗಳೂರು
೯೮೪೫೧೩೫೭೮೭

Leave a Comment

Your email address will not be published. Required fields are marked *