ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಭತ್ತ ಬೇಸಾಯ ರಕ್ಷಿಸುವಲ್ಲಿ ಯುವಜನತೆಯ ಪಾತ್ರ ಕಾರ್ಯಕ್ರಮದ ಅಂಗವಾಗಿ ನೇಜಿ ನಾಟಿ ಕಾರ್ಯಕ್ರಮ ಹಾಗೂ ಪ್ರಾತ್ಯಕ್ಷಿಕೆ ಕಂದ್ರಪ್ಪಾಡಿ ಪ್ರೀತಮ್ ಮುಂಡೋಡಿ ಅವರ ಗದ್ದೆಯಲ್ಲಿ ನಡೆಯಿತು.
ಕೃಷಿಯ ಬಗ್ಗೆ ಆಸಕ್ತಿ ಬೆಳೆಯಲಿ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಪಠ್ಯದ ವಿಚಾರಗಳ ಬಗ್ಗೆ ಚರ್ಚಿಸಿದೆ ಪಠ್ಯೇತರ ವಿಚಾರಗಳನ್ನೂ ಕಲಿಯಬೇಕಿದೆ. ಇತ್ತೀಚೆಗೆ ಗದ್ದೆಗಳು ಕಣ್ಮರೆಯಾಗುತ್ತಿದ್ದು, ಗದ್ದೆ ಕೃಷಿಯ ಬಗ್ಗೆ ಮಾಹಿತಿ ಇಂದಿನ ಮಕ್ಕಳಿಗೆ ತಿಳಿದಿಲ್ಲ. ಪ್ರಸ್ತುತ ಮಕ್ಕಳಿಗೆ ಗದ್ದೆ ಕೃಷಿ ಬಗ್ಗೆ ತಿಳಿಸುವ ಉದ್ದೇಶದ ಜತೆಗೆ ಕೃಷಿಯ ಬಗ್ಗೆ ಆಸಕ್ತಿ ಬೆಳೆಯಲು ನೇಜಿ ನಾಟಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದರು.
ಕೈಯಲ್ಲಿ ಪೆನ್ನು, ಪುಸ್ತಕ ಹಿಡಿದು ಬರೆಯುವುದರ ಮೂಲಕ ಪಾಠಪ್ರವಚನ ಆಲಿಸುವ ಕಾಲೇಜು ವಿದ್ಯಾರ್ಥಿಗಳು, ಸಾಂಪ್ರದಾಯಿಕ ಉಡುಗೆ ಧರಿಸಿ ಕೆಸರಿನ ಗದ್ದೆಗಿಳಿದು ನೇಜಿ ನೆಟ್ಟು ಕೈಕೆಸರಾದರೆ ಬಾಯಿ ಮೊಸರು ಎಂಬ ಪಾಠವನ್ನು ಕಲಿತರು. ರೈತನ ನಿಜ ಜೀವನದ ಕಠಿಣ ಪರಿಶ್ರಮದ ಕುರಿತು ನೈಜ ಅನುಭವ ಪಡೆದುಕೊಂಡರು. ಈ ಕಾರ್ಯದ ಮೂಲಕ ನೇಗಿಲ ಯೋಗಿಯ ನೈಜ ಶ್ರಮ ವಿದ್ಯಾರ್ಥಿಗಳಿಗೆ ತಿಳಿಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಥಮ ಬಿಕಾಂ ಎ ಮತ್ತು ಬಿಕಾಂ ಬಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ನೇಜಿ ನಾಟಿ ಕಾರ್ಯದಲ್ಲಿ ಭಾಗವಹಿಸಿದ್ದರು. ಪ್ರಾಂಶುಪಾಲರಾದ ಡಾ| ದಿನೇಶ ಪಿ.ಟಿ. ಹಾಗೂ ಐಕ್ಯೂಎಸಿ ಘಟಕ ಸಂಯೋಜಕಿ ಲತಾ ಬಿ.ಟಿ. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕ ರಾಮನಾಥ್ ಎ., ರಮ್ಯ ಎಂ. ಉಪಸ್ಥಿತರಿದ್ದರು.