ಸಮಗ್ರ ನ್ಯೂಸ್: ಬಗೆದಷ್ಟು ಬಯಲಾಗುತ್ತಿದೆ ಭ್ರೂಣ ಹತ್ಯೆ ಪ್ರಕರಣ. ಸದ್ಯ ಮತ್ತೊಬ್ಬ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದು, ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಂಜುಳಾ ಅವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೂ 10 ಜನರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಈ ಪ್ರಕರಣವನ್ನು ಅಧಿಕೃತವಾಗಿ ಸಿಐಡಿಗೆ ವರ್ಗಾವಣೆ ಮಾಡಲು ತಯಾರಿ ನಡೆಸಿರುವಾಗಲೇ ಕೆಲ ಅಂಶ ಹೊರಬಂದಿದೆ.
ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ನರ್ಸ್ ಮಂಜುಳಾ ಕೆಲಸ ಬಿಟ್ಟಿದ್ದಳು. ಬಳಿಕ ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕೆಲಸಕ್ಕೆ ಸೇರಿದ್ದಳು. ಕಳೆದ ಹಲವಾರು ದಿನಗಳಿಂದ ಪೊಲೀಸರು ಮಂಜುಳಾಳನ್ನು ಹುಡುಕಾಟ ನಡೆಸುತ್ತಿದ್ದರು. ಸದ್ಯ ಮಂಜುಳಾ ಕೆಲಸ ಮಾಡ್ತಿದ್ದ ಖಾಸಗಿ ಆಸ್ಪತ್ರೆಗೆ ತೆರಳಿ ಬೈಯ್ಯಪ್ಪಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಸಂಬಂಧದ ಕೇಸ್ ಫೈಲ್ ಹಾಗು ಬಂಧಿತ ಆರೋಪಿಗಳನ್ನು ಇಂದು ಸಿಐಡಿಗೆ ಹಸ್ತಾಂತರಿಸಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ. ಸಿಐಡಿಯ ಡಿವೈಎಸ್ ಪಿ ನಾಗರಾಜ್ ರನ್ನು ಪ್ರಕರಣದ ಮುಂದಿನ ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇದುವರೆಗೆ ಪ್ರಕರಣದ ತನಿಖೆ ನಡೆಸಿದ್ದ ಬೈಯಪ್ಪನಹಳ್ಳಿ ಇನ್ಸ್ಪೆಕ್ಟರ್ ಎಂ ಪ್ರಶಾಂತ್ ಅವರು ಕೇಸನ್ನು ವರ್ಗಾಯಿಸಲಿದ್ದಾರೆ.
ಭ್ರೂಣ ಹತ್ಯೆ ಪ್ರಕರಣದಲ್ಲಿ ಪೊಲೀಸರು ನರ್ಸ್ ಮಂಜುಳಾಳನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಭ್ರೂಣ ಹತ್ಯೆಯ ಕುರಿತು ಸ್ಫೋಟಕ ಮಾಹಿತಿಗಳನ್ನು ಇಂಚಿಚಾಗಿ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ. ತಿಂಗಳಲ್ಲಿ ಕನಿಷ್ಠ 2 ಪ್ರಕರಣದಲ್ಲಿ 6 ತಿಂಗಳ ಮಕ್ಕಳನ್ನು ಹೊರತೆಗೆದಿದ್ದೇನೆ. ಆ ಮಕ್ಕಳಿಗೆ ಜೀವ ಇರುತ್ತಿತ್ತು. 6 ತಿಂಗಳ ಮಗುವಿಗೆ ಧ್ವನಿ ಇರುವುದಿಲ್ಲ. ಮಗು ಹೊರಗೆ ತೆಗೆದ 5ರಿಂದ 10 ನಿಮಿಷದಲ್ಲಿ ಸಾಯುತ್ತಿದ್ದವು. ಅದನ್ನು ಪೇಪರ್‌ನಲ್ಲಿ ಸುತ್ತಿ ನಿಸಾರ್‌ಗೆ ಕೊಡುತ್ತಿದ್ದೆ. ನಿಸಾರ್ ಆ ಮಗುವನ್ನು ತೆಗೆದುಕೊಂಡು ಹೋಗಿ ಕಾವೇರಿ ನದಿಗೆ ಬಿಸಾಕಿ ಬರುತ್ತಿದ್ದ ಎಂದು ಹೇಳಿದ್ದಾಳೆ.
ಅಲ್ಲದೇ, 12 ವಾರ ಕಳೆದ ಮಕ್ಕಳನ್ನು ಅಬಾರ್ಟ್ ಮಾಡಿ ಮೆಡಿಕಲ್ ವೇಸ್ಟ್‌ಗೆ ಹಾಕುತ್ತಿದ್ದೆವು. 4 ದಿನಕ್ಕೆ ಮೆಡಿಕಲ್ ವೇಸ್ಟ್ ಅಲ್ಲಿ ಮಗು ಕೊಳೆತು ಹೋಗುತ್ತಿತ್ತು ಎಂಬ ಭಯಾನಕ ವಿಚಾರವನ್ನು ನರ್ಸ್ ಮಂಜುಳಾ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ. ಜೊತೆಗೆ, ಕಳೆದೊಂದು ವರ್ಷದಿಂದ ನಾನು ಚಂದನ್ ಬಲ್ಲಾಳ್ ಬಳಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡಿದ್ದೇನೆ. ಈ ಮೊದಲು ರೀಸ್ಮಾ ಅಬಾರ್ಷನ್ ಮಾಡುವ ಕೆಲಸವನ್ನು ಮಾಡುತ್ತಿದ್ದಳು. ಅವಳಾದ ಬಳಿಕ ನಾನು ಮಗುವನ್ನು ಅಬಾರ್ಷನ್ ಮಾಡುವುದಕ್ಕೆ ಸೇರಿಕೊಂಡಿದ್ದೆ. 6 ತಿಂಗಳ ಮಗುವನ್ನು ನಾನು ಅಬಾರ್ಷನ್ ಮಾಡಿದ್ದೇನೆ ಎಂದಿದ್ದಾಳೆ